ಒಬ್ಬ ನಾಯಕ; ಇಬ್ಬರು ನಾಯಕಿಯರು ... ಇದೊಂದು ಸ್ನೇಹದ ಕಥೆ!

Padavipoorva - Final
Published on

ಬೆಂಗಳೂರು: ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರಕ್ಕೆ ಕಳೆದ ವಾರವಷ್ಟೇ ಅಂಜಲಿ ಅನೀಶ್ ಎಂಬ ಹುಡುಗಿಯ ಆಯ್ಕೆಯಾಗಿತ್ತು. ಈಗ ಚಿತ್ರದ ಇನ್ನೊಬ್ಬ ನಾಯಕಿಯ ಪಾತ್ರ ಯಶ ಶಿವಕುಮಾರ್‌ಗೆ ಸಿಕ್ಕಿದೆ. ಅಲ್ಲಿಗೆ ಚಿತ್ರದ ಇಬ್ಬರು ನಾಯಕಿಯರ ಆಯ್ಕೆ ಆಗಿದ್ದು, ಮಿಕ್ಕಂತೆ ಇನ್ನೊಂದಿಷ್ಟು ಪಾತ್ರಗಳ ಆಯ್ಕೆ ಮುಗಿಸಿ, ನವೆಂಬರ್​ 18ರಿಂದ ಚಿತ್ರೀಕರಣ ಪ್ರಾರಂಭಿಸುವ ಯೋಚನೆ ಚಿತ್ರತಂಡಕ್ಕಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 'ಪದವಿಪೂರ್ವ' ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು ಹೋಗಿರಬೇಕಿತ್ತು. ಈ ವರ್ಷದ ಆರಂಭದಲ್ಲೇ ಈ ಚಿತ್ರವನ್ನು ಘೋಷಿಸಲಾಗಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರೀಕರಣ ಮುಂದಕ್ಕೆ ದೂಡಲ್ಪಟ್ಟಿತ್ತು. ಈಗ ಎಲ್ಲವೂ ಒಂದು ಲೆವೆಲ್​ಗೆ ಬಂದಿದ್ದು ಮುಂದಿನ ತಿಂಗಳನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

'ಪದವಿಪೂರ್ವ' ಎಂಬ ಹೆಸರು ಕೇಳಿದರೆ, ಇದೊಂದು ಕಾಲೇಜ್​ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು, ಒಬ್ಬ ಹುಡುಗ, ಇಬ್ಬರು ಹುಡುಗಿಯರು ಎಂದರೆ, ತ್ರಿಕೋನ ಪ್ರೇಮಕಥೆ ಎಂಬ ಭಾವನೆ ಬರುವುದು ಸಹಜ. ಆದರೆ, ಇದೊಂದು ಪ್ರೇಮಕಥೆ ಎನ್ನುವುದಕ್ಕಿಂತ ಇದೊಂದು ಸ್ನೇಹ ಕಥೆ ಎಂಬುದು ಚಿತ್ರತಂಡದವರ ಅಭಿಪ್ರಾಯ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಹರಿಪ್ರಸಾದ್​, ‘ಒಬ್ಬ ಹುಡುಗ, ಇಬ್ಬರು ಹುಡುಗಿಯರು ಎಂದರೆ, ಇದೊಂದು ಪ್ರೇಮಕಥೆ ಅಂತಲ್ಲ. ಇದೊಂದು ಸ್ನೇಹದ ಕಥೆ. 97ರಲ್ಲಿ ಮಲನಾಡಿನಲ್ಲಿ ನಡೆಯುವ ಒಂದು ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಮೊಬೈಲ್ ಬರುವುದಕ್ಕಿಂತ ಮುನ್ನ ಸ್ನೇಹ ಹೇಗಿತ್ತು ಎಂದು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ನವೆಂಬರ್ 18ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಹೊಸನಗರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರದಲ್ಲಿ ಪೃಥ್ವಿ ಶಾಮನೂರು, ಅಂಜಲಿ, ಯಶ ಜತೆಗೆ ಇನ್ನೊಂದು ಹೊಸ ಹುಡುಗ-ಹುಡುಗಿಯರು ನಟಿಸುತ್ತಿದ್ದು ಮುಂದಿನ ವಾರ ಆಡಿಷನ್‌ಗಳು ನಡೆಲಿದೆಯಂತೆ.

'ಪದವರಿಪೂರ್ವ' ಚಿತ್ರವನ್ನು ಯೋಗರಾಜ್ ಸಿನಿಮಾಸ್‌ನಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಜತೆಯಾಗಿ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net