ಬದುಕಿನ ‘ಔಟ್ ಆಫ್​ ಸಿಲಬಸ್’: ಇದೇ ತಿಂಗಳ 27ಕ್ಕೆ ಸಿನಿಮಾ ರಿಲೀಸ್

out of syallabus
Published on

ಬೆಂಗಳೂರು: ಪ್ರದೀಪ್ ದೊಡ್ಡಯ್ಯ ನಟಿಸಿ, ನಿರ್ದೇಶಿಸಿರುವ ಚಿತ್ರ ‘ಔಟ್ ಆಫ್ ಸಿಲಬಸ್’. ಕಾಮಿಡಿ ಜಾನರ್‌ನ ಈ ಚಿತ್ರವು ಸೆಟ್ಟೇರಿದ ದಿನದಿಂದಲೂ ಸದ್ದು ಮಾಡುತ್ತಿದೆ. ಬಿಡುಗಡೆ ಮುನ್ನವೇ ಚಿತ್ರದ 5 ಸಾವಿರ ಟಿಕೆಟ್‌ಗಳು ಮಾರಾಟವಾಗಿದ್ದು, ಈ ಮೂಲಕ ಹೊಸ ಅಲೆ ಸೃಷ್ಟಿಸಲು ಮುಂದಾಗಿದೆ. ಚಿತ್ರದಲ್ಲಿ ಪ್ರದೀಪ್‌ಗೆ ಹೃತಿಕಾ ಶ್ರೀನಿವಾಸ್ ಜೋಡಿಯಾಗಿದ್ದಾರೆ. ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಪ್ರಕೃತಿ, ಶ್ರವಣ್ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ. ಇದೇ ತಿಂಗಳ 27ಕ್ಕೆ ಚಿತ್ರ ರಿಲೀಸ್ ಆಗುತ್ತಿದ್ದು, ಇದಕ್ಕೂ ಮುನ್ನ ಚಿತ್ರದ ಟ್ರೇಲರ್‌ನ್ನು ನಿರ್ಮಾಪಕಿ, ಎಡಿ6 ಎಂಟರ್ಟೇನ್ಮೆಂಟ್‌ನ ಕೆ.ವಿಜಯಕಲಾ ಸುಧಾಕರ್ ಬಿಡುಗಡೆಗೊಳಿಸಿದರು. ಕಾಲೇಜು ಜೀವನ, ಪ್ರೀತಿ, ದಾಂಪತ್ಯ, ಬದುಕಿನ ಸಿಹಿ-ಕಹಿಗಳು ಹೀಗೆ ಹಲವಾರು ವಿಚಾರಗಳು ಟ್ರೇಲರ್‌ನಲ್ಲಿವೆ. ಯೋಗರಾಜ್ ಭಟ್, ಅಚ್ಯುತ್ ಕುಮಾರ್ ಪಾತ್ರಗಳು ಗಮನಸೆಳೆಯುತ್ತವೆ. ನಿರ್ಮಾಪಕಿ ವಿಜಯಕಲಾ, ‘ಇದು ನಮ್ಮ ಚೊಚ್ಚಲ ನಿರ್ಮಾಣದ ಸಿನಿಮಾ. ಇದು ನಮಗೆ ಸಿಕ್ಕ ದೊಡ್ಡ ವೇದಿಕೆ. ಮೊದಲಿಗೆ ಪ್ರದೀಪ್ ಬಂದು ಕಥೆ ಹೇಳಿದಾಗ ನಮಗೆ ಇಷ್ಟವಾಯಿತು. ಬಳಿಕ ನಮ್ಮ ಸಂಸ್ಥೆಯಿಂದ ನಿರ್ಮಾಣಕ್ಕೆ ಮುಂದಾದೆವು. ಈ ಮೂಲಕ ಪ್ರತಿಭೆಯನ್ನು ಮುಂದೆ ತರುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಇದಕ್ಕೆ ಪ್ರದೀಪ್ ತಮ್ಮ ಕೆಲಸದ ಮೂಲಕ ಪೂರ್ಣವಾಗಿ ತುಂಬಿದ್ದಾರೆ. ಕಲಾವಿದರು ಸೇರಿ ಎಲ್ಲರೂ ಪರಿಶ್ರಮ ಪಟ್ಟಿದ್ದು, ಗೆಲ್ಲುವ ಭರವಸೆ ನಮಗಿದೆ’ ಎಂದರು. ವಿತರಕ ಉಮಾಶಂಕರ್, ‘ಈಗಿನ ಕಾಲಕ್ಕೆ ಏನು ಬೇಕೋ ಆ ಕಂಟೆಂಟ್ ಈ ಸಿನಿಮಾದಲ್ಲಿದೆ. ಹಾಗಾಗಿ ವಿತರಕನಾಗಲು ಒಪ್ಪಿಕೊಂಡೆ’ ಎಂದರು. ಉಮೇಶ್ ಆರ್‌ಬಿ ಸಂಕಲನ, ದೇವ ಛಾಯಾಗ್ರಹಣ ಚಿತ್ರಕ್ಕಿದೆ.

80ರಷ್ಟು ಅನುಭವಗಳಿವೆ: ಪ್ರದೀಪ್ ದೊಡ್ಡಯ್ಯ ತಮ್ಮ ಮೊದಲ ಪ್ರಯತ್ನದ ಕುರಿತು, ‘ಇದು ಕನ್ನಡದವರಿಗಾಗಿ ಮಾಡಿದ ಸಿನಿಮಾ. ಕಲಾವಿದರು, ವಿದ್ಯಾರ್ಥಿಗಳು ಸೇರಿ 10 ಸಾವಿರ ಜನ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಐದು ಕಾಲೇಜುಗಳಲ್ಲಿ 90 ದಿನಗಳ ಕಾಲ ಸಿನಿಮಾ ಶೂಟಿಂಗ್ ಮಾಡಲಾಗಿದೆ. ನನ್ನ ಪ್ರಯಾಣದ ಶೇ.80ರಷ್ಟು ಅನುಭವಗಳಲ್ಲಿ ಇಲ್ಲಿ ಚಿತ್ರಿಸಿದ್ದೇವೆ. ಬದುಕಿಗೆ ಹತ್ತಿರವಾಗುವ ಹಲವು ವಿಚಾರಗಳಿದ್ದು, ಇದು ಎಲ್ಲ ವಯೋಮಾನದವರಿಗೆ ಇಷ್ಟವಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಇಷ್ಟವಾಗುವ ಚಿತ್ರ: ನಟಿ ಹೃತಿಕಾ ಶ್ರೀನಿವಾಸ್, ‘ಇದೊಂದು ಹೊಸ ಜರ್ನಿ. ವಿದ್ಯಾರ್ಥಿಗಳಿಗೆ ತುಂಬಾ ಇಷ್ಟವಾಗುವ ಕಥೆ. ನನ್ನದು ವಿಭಿನ್ನ ಪಾತ್ರವಾಗಿದ್ದು, ಯಶಸ್ವಿಯಾಗಿ ನಿರ್ವಹಿಸಿದ್ದೇನೆ’ ಎಂದರು. ಎರಡನೇ ನಾಯಕಿ ಪ್ರಕೃತಿ ಮಾತನಾಡಿ, ‘ಇದು ನನಗೆ ಮೊದಲ ಸಿನಿಮಾ. ಇದು ಎಲ್ಲರಿಗೂ ಖಂಡಿತವಾಗಿಯೂ ಇಷ್ಟವಾಗುತ್ತೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net