

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 8, ಹಲವು ರೋಚಕ ಕ್ಷಣಗಳಿಗೆ ಮತ್ತು ಬದಲಾವಣೆಗೆ ಸಾಕ್ಷಿಯಾಗಿತ್ತು. ಅಂತಿಮವಾಗಿ ಮಂಜು ಪಾವಗಡ ವಿಜೇತರಾದರೆ, ಬೈಕ್ ರೇಸರ್ ಅರವಿಂದ್ ಕೆ.ಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡುವ ಅರವಿಂದ್, ಶಾಲೆಯಂತೆ ‘ಬಿಗ್ ಬಾಸ್’ನಲ್ಲೂ ಕಲಿಯುವುದಕ್ಕೆ ಸಾಕಷ್ಟು ವಿಷಯಗಳು ಸಿಕ್ಕಿವೆ ಎನ್ನುತ್ತಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು. ‘ಸಿನಿಮಾ ಮಂದಿಯಾದರೆ ಜನರಿಗೆ ಪರಿಚಿತರಾಗಿರುತ್ತಾರೆ. ಆದರೆ, ನಾನು ಅಪರಿಚಿತ. ಅವರೆಲ್ಲರ ನಡುವೆ ನಾನು ಕೊನೆಯವರೆಗೂ ಈ ಕಾರ್ಯಕ್ರಮದಲ್ಲಿ ಇರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. 43 ಲಕ್ಷ ಮತಗಳನ್ನು ಸಂಪಾದಿಸಿರುವುದು ನನ್ನ ಪಾಲಿಗೆ ಸಣ್ಣ ವಿಷಯವೇ ಅಲ್ಲ. ರನ್ನರ್ ಅಪ್ ಆದರೂ ನಾಡಿನ ಮೂಲೆ ಮೂಲೆ ತಲುಪಿದ್ದೇನೆ ಎಂಬ ಖುಷಿ ಇದೆ’ ಎಂಬುದು ಅವರ ಮಾತು.
ರೇಸಿಂಗ್ ಅಕಾಡೆಮಿ ಪ್ಲಾನ್: ರೇಸಿಂಗ್ ಅಕಾಡೆಮಿಯೊಂದನ್ನು ಸ್ಥಾಪಿಸಬೇಕು ಎಂಬುದು ಅರವಿಂದ್ ಅವರ ಬಹುದಿನಗಳ ಕನಸಂತೆ. ‘2020ರಲ್ಲೇ ರೇಸಿಂಗ್ ಅಕಾಡೆಮಿ ಶುರು ಮಾಡುವ ಕೆಲಸ ಆರಂಭಿಸಿದ್ದೆ. ಇನ್ನೇನು ಅದರ ಕೆಲಸಗಳು ಶುರುವಾಗಬೇಕೆನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆ ಆಯಿತು. ಈ ವರ್ಷ ‘ಬಿಗ್ ಬಾಸ್’ಗೆ ಹೋಗಿದ್ದರಿಂದ ಸಾಧ್ಯವಾಗಲಿಲ್ಲ. ಇದೀಗ ರೇಸಿಂಗ್ ಅಕಾಡೆಮಿ ಪ್ಲಾನಿಂಗ್ ನಡೆಯುತ್ತಿದೆ. ಸದ್ಯ ರೇಸಿಂಗ್ ಕ್ಯಾಲೆಂಡರ್ ಹೇಗಿದೆ? ಯಾವ ದೇಶಗಳಲ್ಲಿ ಶೆಡ್ಯೂಲ್ ಆಗಿದೆ ಎಂಬುದನ್ನು ನೋಡಿಕೊಂಡು ಹೆಜ್ಜೆ ಇಡುವೆ’ ಎನ್ನುತ್ತಾರೆ ಅರವಿಂದ್.
ಸಿನಿಮಾ ಅವಕಾಶ ಸಿಕ್ಕರೆ ಬಿಡಲ್ಲ: ಅರವಿಂದ್ ಮತ್ತು ದಿವ್ಯಾ ಉರುಡುಗ ಅಭಿನಯದಲ್ಲಿ ‘ಅರಿವಿಯಾ’ ಎಂಬ ಚಿತ್ರ ಮಾಡುವುದಾಗಿ ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಹೇಳಿದ್ದರು. ಸಿನಿಮಾದಲ್ಲಿ ನಟಿಸುವ ಕುರಿತು ಅರವಿಂದ್ ಅವರನ್ನು ಕೇಳಿದರೆ, ಯಾವುದೇ ಕೆಲಸ ಕೊಟ್ಟರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಇದೆ ಎನ್ನುತ್ತಾರೆ. ‘ಸಿನಿಮಾ ಕ್ಷೇತ್ರದ ಜತೆಗಿನ ನಂಟು ಬೆಳೆದಿದೆ. ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಒಂದಷ್ಟು ಸಿನಿಮಾ ಮಾತುಕತೆಗಳು ನಡೆಯುತ್ತಿವೆಯಷ್ಟೇ. ಒಳ್ಳೇ ಸಿನಿಮಾ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ’ ಎಂಬುದು ಅರವಿಂದ್ ನಿರ್ಧಾರ.