ಸದ್ಯಕ್ಕೆ ಮೂರು; ಧನಂಜಯನ ಪ್ರಪಂಚ

ullasa-2
Published on

ಬೆಂಗಳೂರು: ‘ಸದ್ಯ ನಾನು ಆಕ್ಟ್ ಮಾಡ್ತಾ ಇರೋದು ‘ರತ್ನನ್ ಪ್ರಪಂಚ’, ‘ಹೆಡ್ ಬುಷ್’ ಮತ್ತು ವಿಖ್ಯಾತ್ ನಿರ್ಮಾಣದ ಚಿತ್ರಗಳಲ್ಲಿ ಮಾತ್ರ...’ ಎನ್ನುತ್ತಾರೆ ಧನಂಜಯ. ಅವರು ಹಾಗೆನ್ನುವುದಕ್ಕೂ ಕಾರಣಗಳಿವೆ. ಏಕೆಂದರೆ, ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ ಯಾರು ಎಂದರೆ ಮೊದಲು ಬರುವ ಹೆಸರು ಧನಂಜಯ ಅವರದ್ದು. ಯಾವ ಸಿನಿಮಾ ನೋಡಿದರೂ ಅದರಲ್ಲಿ ಅವರಿರುತ್ತಾರೆ. ಹಾಗಾಗಿ ಸದ್ಯಕ್ಕೆ ಧನಂಜಯ್ ಅಭಿನಯಿಸುತ್ತಿರುವ ಚಿತ್ರಗಳ ಸಂಖ್ಯೆ ಎರಡಂಕಿ ಮುಟ್ಟುತ್ತದಾ ಎಂಬ ಗುಮಾನಿ ಬರುವುದು ಸಹಜ. ಅದಕ್ಕೆ ಸರಿಯಾಗಿ, ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡ ಅವರಿಗೆ ಶುಭಕೋರಿ ಅದೆಷ್ಟು ಚಿತ್ರತಂಡಗಳು ಶುಭಾಶಯಗಳನ್ನು ತಿಳಿಸಿವೆ ಎಂದು ಲೆಕ್ಕ ಇಡುವುದು ಕಷ್ಟ. ಹಾಗಾದರೆ, ಧನಂಜಯ್ ಎಷ್ಟು ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ? ಈ ಚಿತ್ರಗಳಿಗೆ ಸಮಯ ಹೇಗೆ ಮೀಸಲಿಡಲಿದ್ದಾರೆ?

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಧನಂಜಯ್, ‘ನಾನು ತುಂಬಾ ಸಿನಿಮಾ ಮಾಡ್ತಿದ್ದೀನಿ ಅಂತ ಎಲ್ಲಾ ಅಂದುಕೊಂಡುಬಿಟ್ಟಿದ್ದಾರೆ. ಹಾಗೇನಿಲ್ಲ. ಈಗಾಗಲೇ ಅಭಿನಯಿಸಿರುವ ‘ಯುವರತ್ನ’, ‘ಪೊಗರು’, ‘ಸಲಗ’, ‘ಬಡವ ರ್ಯಾಸ್ಕಲ್’ ಚಿತ್ರಗಳು ಇಷ್ಟು ಹೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಎಲ್ಲಾ ತಡವಾಯ್ತು. ಈ ಮಧ್ಯೆ ನಾನು ಒಪ್ಪಿರೋದು ಮೂರೇಮೂರು ಚಿತ್ರಗಳನ್ನ. ಇನ್ನೊಂದಿಷ್ಟು ಚಿತ್ರಗಳನ್ನು ಕಮಿಟ್ ಆಗಿರುವುದು ಹೌದು. ಆದರೆ, ಅವೆಲ್ಲಾ ಶುರುವಾಗೋದು ಮುಂದಿನ ವರ್ಷವೇ. ಆದರೆ, ಎಲ್ಲಾ ಚಿತ್ರಗಳು ಒಟ್ಟಿಗೆ ಸೇರಿ, ನಾನು ತುಂಬಾ ಬಿಜಿಯಾಗಿಬಿಟ್ಟಿದ್ದೀನಿ ಅನಿಸುವಂತಿದೆ’ ಎಂದು ಸ್ಪಷ್ಟಪಡಿಸುತ್ತಾರೆ.

ಈ ಪೈಕಿ ‘ರತ್ನನ್ ಪ್ರಪಂಚ’ ಮತ್ತು ವಿಖ್ಯಾತ್ ಚಿತ್ರವನ್ನು ಮೊದಲು ಮುಗಿಸಿ, ನವೆಂಬರ್​ನಿಂದ ಜಯರಾಜ್ ಬಯೋಪಿಕ್ ಆದ ‘ಹೆಡ್ ಬುಷ್’ನಲ್ಲಿ ಅವರು ನಟಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಈಗ ಹೆಡ್ ಬುಷ್ ಚಿತ್ರಕ್ಕೆ ರೆಡಿಯಾಗುತ್ತಿದ್ದೇನೆ. ಈ ಚಿತ್ರಕ್ಕೆ ದೇಹ ಹುರಿಗೊಳಿಸುತ್ತಿದ್ದೇನೆ. ಅದು ಮುಗಿದ ನಂತರವಷ್ಟೇ ಮುಂದಿನ ಯೋಚನೆ’ ಎನ್ನುತ್ತಾರೆ ಧನಂಜಯ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net