ಆನ್​ಲೈನ್​ನಲ್ಲಿ ಅಭಿನಯದ ಪಾಠ

Samantha vvani
Published on

ಸಾಮಾನ್ಯವಾಗಿ ಅಭಿನಯದ ಪಾಠ ಕಲಿತು ಚಿತ್ರರಂಗಕ್ಕೆ ಬರುವುದು ವಾಡಿಕೆ. ಚಿತ್ರರಂಗಕ್ಕೆ ಬಂದು, ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ ನಂತರ, ಅಭಿನಯದ ಪಟ್ಟುಗಳನ್ನು ಕಲಿಯುವವರನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲದಿದ್ದರೆ ಇಲ್ಲಿ ಕೇಳಿ.

ತೆಲುಗಿನ ಜನಪ್ರಿಯ ನಟಿ ಸಮಂತಾ ಅಕ್ಕಿನೇನಿ, ಇದೀಗ ಆನ್​ಲೈನ್ ಮೂಲಕ ಅಭಿನಯ ಕಲಿಯುತ್ತಿದ್ದಾರೆ. ಹೌದು, ಕಳೆದ ಒಂದೂವರೆ ತಿಂಗಳುಗಳಿಂದ ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್ ಆಗಿರುವ ಸಮಂತಾ, ಹಾಲಿವುಡ್​ನ ಖ್ಯಾತ ನಟಿ ಹೆಲೆನ್ ಮಿರ್ರೆನ್ ಅವರಿಂದ ಅಭಿನಯದ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಅಷ್ಟೇ ಅಲ್ಲ, ಮಿರ್ರೆನ್ ಅವರ ಆನ್​ಲೈನ್ ಕ್ಲಾಸ್​ನ ಚಿತ್ರವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

‘ಹಲವು ದಿನಗಳಲ್ಲಿ, ಸ್ವಲ್ಪ ಸಮಯವಾದರೂ ಉಪಯೋಗಕ್ಕೆ ಬಂದರೆ, ಅದಕ್ಕಿಂತ ಖುಷಿಯೇನಿದೆ. ಇನ್ನು ಮುಂದೆ ನಾನು ಇನ್ನಷ್ಟು ಚೆನ್ನಾಗಿ ನಟಿಸುವ ಪ್ರಯತ್ನ ಮಾಡುತ್ತೇನೆ. ಕಾದು ನೋಡಿ ...’ ಎಂದು ಸಮಂತಾ ಬರೆದುಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಸಮಂತಾ ಅಭಿನಯದ ‘ಜಾನು’ ಎಂಬ ಚಿತ್ರ ಬಿಡುಗಡೆಯಾಗಿದ್ದು, ವಿಘ್ನೇಶ್ ಶಿವನ್ ಅಭಿನಯದ ತಮಿಳು ಚಿತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಸಮಂತಾ ಅಭಿನಯ ಇನ್ನಷ್ಟು ಪಕ್ವವಾಗಿದ್ದರೆ, ಆಶ್ಚರ್ಯ ಪಡಬೇಡಿ. ಅದಕ್ಕೆ ಕಾರಣ, ಹೆಲೆನ್ ಮಿರ್ರೆನ್ ಎಂಬುದನ್ನು ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net