ಸೃಷ್ಟಿಯ ವೈಶಿಷ್ಟ್ಯ ತಿಳಿಸುವ ಒನ್​ಪ್ಲ್ಯಾನೆಟ್​; ಇದು ಸಂಯುಕ್ತ ಹೊರನಾಡು ಅವರ ಲಾಕ್​ಡೌನ್​ ಸಿನಿಮಾ

page 10 1
Published on

ಈ ಲಾಕ್​ಡೌನ್ ಸಮಯದಲ್ಲಿ ನಾನು ತುಂಬಾ ಸಿನಿಮಾ ನೋಡಿದ್ದೆ. ಅದರಲ್ಲಿ ಈಗಿನ ಸಮಯಕ್ಕೆ ಹೆಚ್ಚು ಸೂಕ್ತ ಅನಿಸುವಂಥ ಒಂದು ಸಿನಿಮಾ ಎಂದರೆ ‘ಒನ್ ಪ್ಲಾ್ಯನೆಟ್’. ಐವತ್ತು ನಿಮಿಷಗಳ ಡಾಕ್ಯುಮೆಂಟರಿಯಂಥ ಈ ಸಿನಿಮಾ ಮಾಹಿತಿ-ಮನರಂಜನೆ ಎರಡನ್ನೂ ಒಳಗೊಂಡಿದೆ. ಇದನ್ನು ನೋಡಿದರೆ ನಮಗೆ ಪ್ರಾಣಿ, ಪಕ್ಷಿ, ನೀರು ಹಾಗೂ ಭೂಮಿ ಕುರಿತ ಕಲ್ಪನೆಯೇ ಬದಲಾಗಿ ಬಿಡುತ್ತದೆ. ಈ ಸಿನಿಮಾ ನೋಡಿ ಅಂತ ಮೊನ್ನೆ ವಿಶ್ವ ಭೂಮಿ ದಿನ ನಾನು ಬಹಳಷ್ಟು ಮಂದಿಗೆ ಹೇಳಿದ್ದೆ, ನೋಡಿದವರೆಲ್ಲರೂ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ಮಾತನ್ನು ಈಗ ಮತ್ತೊಮ್ಮೆ ಹೇಳುತ್ತೇನೆ. ಈ ಸಿನಿಮಾ ಎಲ್ಲರೂ ನೋಡಲೇಬೇಕಾದಂಥದ್ದು, ಅದರಲ್ಲೂ ಕರೊನಾ ಕಾಡುತ್ತಿರುವ ಈ ಸಮಯದಲ್ಲಿ ಇದು ಹೇಳಿ ಮಾಡಿಸಿದಂಥ ಸಿನಿಮಾ. ಮನುಷ್ಯ ನಾನೇ ಎಲ್ಲ, ನಾನು ಏನು ಬೇಕಾದರೂ ಮಾಡಬಲ್ಲೆ ಎಂದುಕೊಂಡಿರುತ್ತಾನೆ. ಆದರೆ ಈಗ ಕಣ್ಣಿಗೆ ಕಾಣದ ಸಣ್ಣ ವೈರಸ್ ಜಗತ್ತನ್ನೇ ನಡುಗಿಸಿಬಿಟ್ಟಿದೆ. ಅದಕ್ಕೆ ಹೆದರಿದ ಮನುಷ್ಯ ಮನೆಯೊಳಗೇ ಕುಳಿತಿರುವುದರಿಂದ ಪ್ರಕೃತಿ ಕೂಡ ನಳನಳಿಸುತ್ತಿದೆ. ನಾನಿಲ್ಲ ಎಂದರೆ ಏನೂ ಇರುವುದಿಲ್ಲ ಎಂಬ ಅಹಂ ಮನುಷ್ಯನಿಗಿದೆ. ಅಂಥ ಅಹಂ ನೀಗಿಸುವ ಚಿತ್ರಣ ಈ ಸಿನಿಮಾದಲ್ಲಿದೆ. ಮನುಷ್ಯ ತಾನೇ ಎಲ್ಲದರ ಕೇಂದ್ರ ಬಿಂದು ಎಂದಕೊಂಡಿರುತ್ತಾನೆ. ಆದರೆ ಅವೆಲ್ಲ ಸುಳ್ಳು ಎನ್ನುವುದು ಈ ಸಿನಿಮಾದಿಂದ ತಿಳಿಯತ್ತದೆ. ಮನುಷ್ಯ ಇಲ್ಲ ಅಂದರೆ ಈ ಜಗತ್ತಿಗೆ ಏನೂ ಆಗುವುದಿಲ್ಲ. ಅದು ಈ ಕರೊನಾ ಸಮಯದಲ್ಲಿ ಎಲ್ಲರ ಗಮನಕ್ಕೂ ಬಂದಿದೆ. ಈ ಸೃಷ್ಟಿ ಅದೆಷ್ಟು ವಿಶಿಷ್ಟವಾದದ್ದು ಎನ್ನುವುದನ್ನು ತಿಳಿಯ ಬೇಕಿದ್ದರೆ ‘ಒನ್ ಪ್ಲಾ್ಯನೆಟ್’ ಖಂಡಿತ ನೋಡಿ.

| ಸಂಯುಕ್ತಾ ಹೊರನಾಡು

ಎಲ್ಲರಂತೆ ನಾನು ಕೂಡ ಲಾಕ್​ಡೌನ್ ಸಮಯದಲ್ಲಿ ಸಿನಿಮಾಗಳನ್ನು ನೋಡಿದ್ದೇನೆ. ಅದರಲ್ಲಿ ನನಗೆ ತುಂಬ ಇಷ್ಟವಾದ ಸಿನಿಮಾ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ’. ಈ ಚಿತ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಅದ್ಭುತವಾಗಿ ಹೇಳಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸುವಲ್ಲಿ ಮಕ್ಕಳ ಹಾಗೂ ಆ ಊರಿನವರ ಶ್ರಮ ಅತ್ಯಂತ ಮಾರ್ವಿುಕವಾಗಿ ವ್ಯಕ್ತಗೊಂಡಿದೆ. ಉಪಾಧ್ಯಾಯರ ಕನ್ನಡ ಅಭಿಮಾನ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.

| ಜಗದೀಶ್ ಹಟ್ಟಿ ನಾಲತವಾಡ, ವಿಜಯಪುರ

ಲಾಕ್​ಡೌನ್ ಸಮಯ ಕಳೆಯಲು ಆಗಾಗ ಟಿವಿ ನೋಡುತ್ತಿದ್ದ ನನಗೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ನೋಡುವ ಅವಕಾಶ ಸಿಕ್ಕಿತು. ಚಿತ್ರ ಸಾಹಿತಿ ಕವಿರಾಜ್ ನಿರ್ದೇಶನದ, ಜಗ್ಗೇಶ್-ಮೇಘನಾ ಗಾಂವ್ಕರ್ ಅಭಿನಯದ ಈ ಚಿತ್ರದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವುದರಲ್ಲಿ ಶಿಕ್ಷಕರ ಸವಾಲು, ಪೋಷಕರಿಗೆ ಖಾಸಗಿ ಶಾಲೆಗಳ ಮೇಲಿನ ಅತಿಯಾದ ವ್ಯಾಮೋಹ , ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಬೀರುತ್ತಿರುವ ಒತ್ತಡ ಮತ್ತದರ ಪರಿಣಾಮಗಳನ್ನು ವೀಕ್ಷಕರ ಮನಮುಟ್ಟುವಂತೆ ತಿಳಿಸಿದ್ದಾರೆ. ಅದಲ್ಲದೆ ಈ ಸಿನಿಮಾದ ಹಾಡುಗಳು ಮತ್ತೆ ಮತ್ತೆ ಗುನುಗುವಂತಿವೆ.

| ಅನೀಶ್ ಬಿ. ಕೊಪ್ಪ ಚಿಕ್ಕಮಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net