

ಬೆಂಗಳೂರು: ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಬಳಿಕ ನಿರ್ದೇಶಕ ಮಯೂರ ರಾಘವೇಂದ್ರ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರವಾಗಿ, ‘ಅಬ ಜಬ ದಬ’ ಸಿನಿಮಾ ಘೋಷಣೆ ಮಾಡಿದ್ದರು. ಇದೀಗ ಆ ಸಿನಿಮಾದ ನಾಯಕ, ನಾಯಕಿ ಯಾರು ಎಂಬ ಕುತೂಹಲವನ್ನೂ ಅವರು ತಣಿಸಿದ್ದಾರೆ. ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾದರೆ, ಕಿರುತೆರೆ ನಟಿ, ನಿರೂಪಕಿ ಅಂಕಿತಾ ಅಮರ್ ಹಿರಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಈ ಹಿಂದೆ ಚಿತ್ರವನ್ನು ಘೋಷಿಸಿದ್ದ ಮಯೂರ, ಚಿತ್ರದಲ್ಲಿ ಶಂಕರ್ನಾಗ್ ಕಾಣಿಸಲಿದ್ದಾರೆ ಎಂದು ಹೇಳಿದ್ದರು. ಮಿಕ್ಕಂತೆ ಚಿತ್ರದಲ್ಲಿ ಯಾರೆಲ್ಲ ಇರುತ್ತಾರೆ ಎಂಬ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಇದೀಗ ಅವರು ಸದ್ದಿಲ್ಲದೆ ಕಲಾವಿದರ ಆಯ್ಕೆಯನ್ನು ಅಂತಿಮ ಮಾಡಿದ್ದಾರೆ. ಬಿಡುಗಡೆ ಆಗಿರುವ ಚಿತ್ರದ ಹೊಸ ಪೋಸ್ಟರ್ನಲ್ಲಿ ಪೃಥ್ವಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಉಗ್ರರ ಕೈಗೆ ಸಿಲುಕಿದ ಭಂಗಿಯಲ್ಲಿ ಕಾಣಿಸಿದರೆ, ಇತ್ತ ಮೈಕ್ ಹಿಡಿದು ಗಾಯಕಿಯಾಗಿ ಅಂಕಿತ ಪೋಸ್ ಕೊಟ್ಟಿದ್ದಾರೆ.
ಫ್ಯಾಂಟಸಿ ಡ್ರಾಮಾ ಶೈಲಿಯ ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಮಯೂರ, ‘ಜ.24 ರಂದು ಚಿತ್ರದ ಮುಹೂರ್ತ ನಡೆಯಲಿದೆ. ಅದಾದ ಬಳಿಕ ಫೆಬ್ರವರಿಯಿಂದ ಸರಿಸುಮಾರು 40 ದಿನಗಳಲ್ಲಿ ಶೂಟಿಂಗ್ ಮುಗಿಸಲಿದ್ದೇವೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ’ ಎನ್ನುತ್ತಾರೆ. ಮುಖ್ಯಮಂತ್ರಿ ಚಂದ್ರು, ಊರ್ವಶಿ, ಅಚ್ಯುತ್ ಕುಮಾರ್, ಸುಧಾರಾಣಿ, ‘ಬಿಗ್ ಬಾಸ್’ ಖ್ಯಾತಿಯ ರಘು ಗೌಡ, ಸತೀಶ್ ಚಂದ್ರ ಪಾತ್ರವರ್ಗದಲ್ಲಿರಲಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ, ಸತೀಶ್ ರಘುನಾಥನ್ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಅನಂತ್ ಕೃಷ್ಣ ನಿರ್ಮಾಪಕರು.