

ಬೆಂಗಳೂರು: ‘ಮುಗಿಲ್ಪೇಟೆ’ ಚಿತ್ರದಲ್ಲಿ 17 ಪಾತ್ರಗಳಲ್ಲಿ ಕಾಣಿಸಿಕೊಂಡರೂ ಯಾವುದೇ ದಾಖಲೆ ಪುಸ್ತಕಕ್ಕೂ ದಾಖಲಾಗಲಿಲ್ಲ ಎಂಬ ಬೇಸರ ಸಾಧು ಕೋಕಿಲ ಅವರಿಗಿತ್ತು. ಈಗ ಅವರ ದಾಖಲೆಯನ್ನು ಯೋಗೇಶ್ ಮಾಸ್ಟರ್ ಮುರಿದಿದ್ದಾರೆ. ಹೊಸ ಚಿತ್ರವೊಂದರಲ್ಲಿ 24 ಪಾತ್ರಗಳಲ್ಲಿ ಅವರು ಕಾಣಿಸಿಕೊಂಡು, ಹೊಸ ದಾಖಲೆ ಮಾಡಿದ್ದಾರೆ. ಈ ಚಿತ್ರದ ಹೆಸರು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’. ಇದು ರವೀಂದ್ರನಾಥ್ ಠಾಕೂರ್ ಅವರ ಸಣ್ಣಕಥೆಯೊಂದನ್ನು ಆಧರಿಸಿದ ಚಿತ್ರ.
ಯೋಗೇಶ್ ಮಾಸ್ಟರ್ ಈ ಹಿಂದೆ ಈ ಕಥೆಯನ್ನಿಟ್ಟುಕೊಂಡು ಏಕವ್ಯಕ್ತಿ ನಾಟಕ ಮಾಡಿದ್ದರಂತೆ. ಈಗ ಚಿತ್ರ ಮಾಡಿದ್ದಾರೆ. ‘ಹಿಂದೆ ನಮ್ಮ ಅಜ್ಜಿಯರು ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಎಂದು ಕಥೆ ಶುರು ಮಾಡುತ್ತಿದ್ದರು. ನಮ್ಮ ಚಿತ್ರವೂ ಅಜ್ಜಿಯೊಬ್ಬರು ಹಾಗೆ ಕಥೆ ಹೇಳುವ ಮೂಲಕ ಶುರುವಾಗುತ್ತದೆ. ಕಥೆ ಕೇಳುವ ಮೊಮ್ಮಗ, ತಾನೇ ಎಲ್ಲ ಪಾತ್ರಗಳಲ್ಲೂ ಜೀವಿಸುತ್ತಾ ಹೋಗುತ್ತಾನೆ. ಎಲ್ಲ ಪಾತ್ರಗಳಲ್ಲೂ ನಾನೇ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಯೋಗೇಶ್ ಮಾಸ್ಟರ್. ಈ ಚಿತ್ರವನ್ನು ನಿರ್ದೇಶಿಸಿರುವವರು ಸಂತೋಷ್ ಕೊಡಂಕೇರಿ. ಕಳೆದ ಲಾಕ್ಡೌನ್ ಸಮಯದಲ್ಲಿ ಈ ಚಿತ್ರದ ಚಿತ್ರೀಕರಣವಾಯಿತಂತೆ.
‘ಇದೊಂದು ಪ್ರಯೋಗಾತ್ಮಕ ಚಿತ್ರ. ಅನೇಕ ಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶನವಾಗಿದೆ. ಆದರೆ, ಬೆಂಗಳೂರು ಚಿತ್ರೋತ್ಸವದಲ್ಲಿ ಆಯ್ಕೆಯಾಗಿಲ್ಲ ಎಂಬ ಬೇಸರವಿದೆ’ ಎನ್ನುತ್ತಾರೆ. ಇದಕ್ಕೆ ಪೂರಕವಾಗಿ, ಯಾವ ಕಾರಣಕ್ಕೆ ತಮ್ಮ ಚಿತ್ರ ಆಯ್ಕೆಯಾಗಲಿಲ್ಲ ಮತ್ತು ಆಯ್ಕೆ ಆಗಬೇಕಾದರೆ ಮಾನದಂಡವೇನು ಎಂದು ಗೊತ್ತಾದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಯೋಗೇಶ್ ಮಾಸ್ಟರ್. ನಟನೆ ಜತೆಗೆ ಚಿತ್ರಕಥೆ, ಗೀತರಚನೆ ಮತ್ತು ಸಂಗೀತದ ಜವಾಬ್ದಾರಿಯನ್ನೂ ಯೋಗೇಶ್ ವಹಿಸಿದರೆ, ಜೀವನ್ ಗೌಡ ಛಾಯಾಗ್ರಹಣ ಈ ಚಿತ್ರಕ್ಕಿದೆ.