

ಬೆಂಗಳೂರು: ‘ಲೂಸ್ ಮಾದ’ ಯೋಗಿ ಮತ್ತು ಅದಿತಿ ಪ್ರಭುದೇವ ಕಾಂಬಿನೇಷನ್ನ ‘ಒಂಭತ್ತನೇ ದಿಕ್ಕು’ ಸಿನಿಮಾ ಬಿಡುಗಡೆಯ ಸಮೀಪದಲ್ಲಿದೆ. ಇನ್ನೇನು ಎರಡು ವಾರಗಳ ಬಳಿಕ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಅದಕ್ಕೂ ಮುನ್ನ ಸಿನಿಮಾದಲ್ಲೇನಿದೆ ಎಂಬುದನ್ನು ಟ್ರೇಲರ್ ಮೂಲಕ ತೋರಿಸಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಈ ಚಿತ್ರದ ಬಗ್ಗೆ ವಿವರಿಸುವ ದಯಾಳ್, ‘ಎರಡು ಟೈಮ್ೈನ್ನಲ್ಲಿ ಈ ಸಿನಿಮಾದ ಕಥೆ ಸಾಗಲಿದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ, ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತ ಹೋಗುತ್ತೇವೆ. ಅದು ಮತ್ತೊಂದು ಕಡೆ ದಕ್ಕುತ್ತದೆ. ಹಾಗಾಗಿಯೇ ನಾನು ಚಿತ್ರಕ್ಕೆ ಒಂಭತ್ತನೇ ದಿಕ್ಕು ಎಂಬ ಶೀರ್ಷಿಕೆಯನ್ನು ಆಯ್ದುಕೊಂಡೆ ಎನ್ನುತ್ತಾರವರು.
‘ಕಂಟೆಂಟ್ ಇರುವ ಕಮರ್ಷಿಯಲ್ ಚಿತ್ರವಿದು. ಈ ಹಿಂದೆಂದೂ ಕಾಣಿಸದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬ ಬೇಗ ಚಿತ್ರದ ಕೆಲಸ ಮುಗಿದಿದೆ. ಚಿತ್ರವನ್ನೂ ನೋಡಿದ್ದೇನೆ. ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ’ ಎಂಬುದು ಯೋಗಿ ಮಾತು. ‘ನಿರ್ದೇಶಕರ ಈ ಹಿಂದಿನ ‘ರಂಗನಾಯಕಿ’ ಚಿತ್ರದಲ್ಲಿ ನಟಿಸಿದ್ದೇನೆ. ಸಿನಿಮಾ ಮೇಲಿನ ಪ್ಯಾಷನ್, ಸರಿಯಾದ ಸಮಯಕ್ಕೆ ಮುಗಿಸುವ ಅವರ ಹಠ ನಿಜಕ್ಕೂ ಮೆಚ್ಚುವಂಥದ್ದು. ಈ ಚಿತ್ರವೂ ಅಷ್ಟೇ ನೈಜವಾಗಿ ಮೂಡಿಬಂದಿದೆ’ ಎನ್ನುತ್ತಾರೆ ಅದಿತಿ. ಹಿರಿಯ ನಟ ಅಶೋಕ್, ಸಾಯಿಕುಮಾರ್, ಸುಂದರ್, ರಮೇಶ್ ಭಟ್, ಶ್ರುತಿ ನಾಯಕ್, ಪ್ರಶಾಂತ್ ಸಿದ್ದಿ ತಾರಾಗಣದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ.