ಓಂ ರಜತ ಸಂಭ್ರಮ

page 10 1
Published on

ಕನ್ನಡದ ಎವರ್​ಗ್ರೀನ್ ಚಿತ್ರಗಳ ಸಾಲಿನಲ್ಲಿ ಉಪೇಂದ್ರ ನಿರ್ದೇಶನದ, ಶಿವರಾಜಕುಮಾರ್ ಅಭಿನಯದ ‘ಓಂ’ ಸಹ ಒಂದು. ಭೂಗತಲೋಕದ ಕುರಿತಾದ ಚಿತ್ರಗಳ ಪಾಲಿಗೆ ಟ್ರೆಂಡ್​ಸೆಟರ್ ಆಗಿರುವ ‘ಓಂ’, ಯಶಸ್ವಿಯಾಗುವುದರ ಜತೆಗೆ, ಕನ್ನಡದಲ್ಲಿ ಅತೀ ಹೆಚ್ಚು ಬಾರಿ ಮರುಬಿಡುಗಡೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹಲವು ದಾಖಲೆಗಳಿಗೆ ಪಾತ್ರವಾಗಿರುವ ಈ ಚಿತ್ರ ಬಿಡುಗಡೆಯಾಗಿ, ಇದೇ ಮೇ 19ಕ್ಕೆ 25 ವರ್ಷಗಳಾಗುತ್ತವೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ಪ್ರೇಮಾ ಚಿತ್ರ ಮೂಡಿ ಬಂದ ರೀತಿಯ ಬಗ್ಗೆ ವಿಜಯವಾಣಿ ಜತೆ ಮೆಲುಕು ಹಾಕಿದ್ದಾರೆ.

‘ಇಟ್ಸ್ ಎ ಮ್ಯಾಜಿಕ್ ...’

‘ಓಂ’ ಚಿತ್ರವನ್ನು ಶಿವರಾಜಕುಮಾರ್ ಬಣ್ಣಿಸುವುದು ಹೀಗೆ. ತಮ್ಮ 25ನೇ ಚಿತ್ರ ಬಿಡುಗಡೆ ಆಗಿ 25 ವರ್ಷ ಪೂರೈಸುತ್ತಿರುವ ಬಗ್ಗೆ ಅವರು ಬಹಳ ಖುಷಿಯಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಆ ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎಂಬುದು ಅವರ ಖುಷಿಗೆ ಇನ್ನೊಂದು ಕಾರಣ.

‘ಅದೊಂದು ಮ್ಯಾಜಿಕ್. ಚಿತ್ರ ಬಿಡುಗಡೆಯಾಗಿ 25 ವರ್ಷಗಳಾದರೂ, ಇನ್ನೂ ಆ ಪವರ್ ಕಡಿಮೆಯಾಗಿಲ್ಲ. ಜನ ಈಗಲೂ ಆ ಚಿತ್ರದ ಬಗ್ಗೆ ಮಾತಾಡುತ್ತಾರೆ, ಥ್ರಿಲ್ ಆಗುತ್ತಾರೆ ಎಂದರೆ ಕಾರಣ ಚಿತ್ರ ಮೂಡಿ ಬಂದಿರುವ ರೀತಿ. ಈ ಚಿತ್ರ ನಮ್ಮ ಹೋಂ ಪ್ರೊಡಕ್ಷನ್​ನಿಂದ ನಿರ್ವಣವಾಗಿತ್ತು, ಅಪ್ಪಾಜಿ-ವರದಪ್ಪಣ್ಣ ಎಲ್ಲಾ ಕೇಳಿ ಓಕೆ ಮಾಡಿದ ಕಥೆ ಅನ್ನೋದು ಇನ್ನೊಂದು ಖುಷಿ’ ಎನ್ನುತ್ತಾರೆ ಶಿವರಾಜಕುಮಾರ್.

ಉಪೇಂದ್ರ ಈ ಕಥೆ ಬರೆಯುವುದಕ್ಕೆ ಮುಖ್ಯ ಸ್ಪೂರ್ತಿ, ಅವರ ಕಾಲೇಜು ದಿನಗಳು. ‘ನಾನು ಕಾಲೇಜಿನಲ್ಲಿ ಓದುವಾಗ, ರೌಡಿಸಂ ಹೆಚ್ಚಿತ್ತು. ಜಯರಾಜ್, ಕೋತ್ವಾಲ್ ರಾಮಚಂದ್ರ ಇವರ ಹೆಸರೆಲ್ಲಾ ಬಹಳ ಕೇಳಿ ಬರುತಿತ್ತು. ನನ್ನ ಅಣ್ಣನ ಫ್ರೆಂಡ್ ಒಬ್ಬರು, ಪುರುಷೋತ್ತಮ್ ಅಂತ. ಅವರ ಜೀವನದಲ್ಲಿ ನಡೆದ ಘಟನೆ ಬಹಳ ಕಾಡುತಿತ್ತು. ಆ ಘಟನೆಯನ್ನು ಈ ರೌಡಿಸಂ ಹಿನ್ನೆಲೆಯಲ್ಲಿ ಇಟ್ಟು ಒಂದು ಕಥೆ ಮಾಡಿದ್ದೆ. ಅದೇ ‘ಓಂ’ ಎನ್ನುತ್ತಾರೆ ಉಪೇಂದ್ರ.

ಈ ಕಥೆಗೆ ಮೊದಲು ಕುಮಾರ್ ಗೋವಿಂದ್ ಅವರು ಹೀರೋ ಆಗಬೇಕಿತ್ತಂತೆ. ‘ಮುಂಚೆ ಈ ಚಿತ್ರಕ್ಕೆ ‘ಸತ್ಯ’ ಎಂಬ ಹೆಸರಿಟ್ಟಿದ್ದೆ. ಆಗ ಕುಮಾರ್ ಗೋವಿಂದ್ ಈ ಚಿತ್ರ ಮಾಡಬೇಕಿತ್ತು. ಆದರೆ, ಮೊದಲ ಬಾರಿಗೆ ಹೀರೋ ಆಗುತ್ತಿರುವವರಿಗೆ ಇದು ಸ್ವಲ್ಪ ಹೆವಿ ಆಗುತ್ತದೆ ಅಂತ ಅನಿಸಿತು. ಆಗ ಅವರಿಗೆ ‘ಶ್’ ಚಿತ್ರ ಮಾಡಿಕೊಟ್ಟೆ. ಆಮೇಲೆ ಹಲವು ನಿರ್ವಪಕರು ಚಿತ್ರ ಮಾಡಬೇಕು ಎಂದು ಮುಂದೆ ಬಂದರು. ಆದರೆ, ಸಿನಿಮಾ ಶುರು ಆಗಲೇ ಇಲ್ಲ. ಒಮ್ಮೆ ಪಾರ್ವತಮ್ಮ ರಾಜಕುಮಾರ್ ಕರೆಸಿದರು. ನಾನು ಮೊದಲು ಕಥೆ ಹೇಳಿದ್ದು ಅಣ್ಣಾವು› ಮತ್ತು ವರದಪ್ಪನವರಿಗೆ. ಅವರು ಕಥೆ ಕೇಳಿ ಓಕೆ ಅಂದರು. ಬಹಳ ಹಸಿಹಸಿಯಾಗಿದ್ದರೂ, ಅವರು ಆ ಕಥೆಯ ಸತ್ವ ಅರ್ಥ ಮಾಡಿಕೊಂಡಿದ್ದರು. ಅವರಿಬ್ಬರದ್ದು ಅದ್ಭುತ ಜೋಡಿ. ಅಣ್ಣಾವು› ಪಾತ್ರದ ಒಳಗಿಳಿದು ಯೋಚಿಸಿದರೆ, ವರದಪ್ಪ ಅವರು ಒಟ್ಟಾರೆ ಚಿತ್ರದ ಬಗ್ಗೆ ಯೋಚಿಸುತ್ತಿದ್ದರು. ಇಬ್ಬರಿಗೂ ಅದ್ಭುತವಾದ ಜಡ್ಜ್​ಮೆಂಟ್ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಉಪೇಂದ್ರ.

ಶಿವರಾಜಕುಮಾರ್ ಸಹ ಅದೇ ವಿಷಯ ಹೇಳುತ್ತಾರೆ. ‘ಆ ತರಹ ರಾ ಆಗಿರುವ ಕಥೆ ನಮ್ಮ ಪ್ರೊಡಕ್ಷನ್​ನಲ್ಲಿ ಬಂದಿದೆ ಎಂದರೆ ಅದಕ್ಕೆ ಕಾರಣ ಎಮೋಷನ್ಸ್. ಎಷ್ಟೇ ಹಸಿಹಸಿಯಾಗಿದ್ದರೂ, ಎಷ್ಟೇ ಕಮರ್ಷಿಯಲ್ ಚಿತ್ರ ಅದಾಗಿದ್ದರೂ, ಎಲ್ಲರಿಗೂ ಸಲ್ಲುವ ಎಮೋಷನ್ ಆ ಚಿತ್ರದಲ್ಲಿದೆ ಮತ್ತು ಎಲ್ಲವನ್ನೂ ನೈಜವಾಗಿ ಹೇಳಲಾಗಿದೆ. ಆ ಚಿತ್ರ ಈಗಲೂ ಇಷ್ಟವಾಗುತ್ತದೆ ಮತ್ತು ಇವತ್ತಿನ ತಲೆಮಾರಿನವರಿಗೂ ಹಿಡಿಸುತ್ತದೆ ಎಂದರೆ ಅದೇ ಕಾರಣ’ ಎನ್ನಲು ಅವರು ಮರೆಯುವುದಿಲ್ಲ.

ಕಾರಣ ಏನೇ ಇರಲಿ, ‘ಓಂ’ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಿಲ್ಲ. ಚಿತ್ರ ಅಪಾರ ಯಶಸ್ಸು ಮತ್ತು ಜನಪ್ರಿಯತೆ ಪಡೆದಿದ್ದಷ್ಟೇ ಅಲ್ಲ, 500ಕ್ಕೂ ಹೆಚ್ಚು ಬಾರಿ ಬಿಡುಗಡೆಯಾಗಿದೆ. ರಾಜ್ಯ ಮಟ್ಟದಲ್ಲಿ ನಾಲ್ಕು ಅತ್ಯುತ್ತಮ ಪ್ರಶಸ್ತಿಗಳನ್ನು ಗೆದ್ದಿದ್ದಷ್ಟೇ ಅಲ್ಲ, ಹಿಂದಿ ಮತ್ತು ತೆಲುಗಿಗೆ ರಿಮೇಕ್ ಸಹ ಆಗಿದೆ.

‘25 ವರ್ಷಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ ಅದು. ಆ ಚಿತ್ರಕ್ಕೀಗ 25 ವರ್ಷ. ಈಗಲೂ ಚಿತ್ರದ ಬಗ್ಗೆ ಜನಕ್ಕೆ ಅಷ್ಟೊಂದು ಪ್ರೀತಿ ಇದೆ ಎಂದರೆ ಖುಷಿಯಾಗುತ್ತದೆ’ ಎಂದು ಮಾತು ಮುಗಿಸುತ್ತಾರೆ ಶಿವರಾಜಕುಮಾರ್.

ಉಪೇಂದ್ರ ನನಗೆ ಪುಟ್ಟಣ್ಣ ಕಣಗಾಲ್!: ‘ಓಂ’ ಸಿನಿಮಾ ಅಂದ ತಕ್ಷಣ ಕಷ್ಟಗಳು ನೆನಪಾಗುತ್ತವೆ. ಅಷ್ಟೊಂದು ಕಷ್ಟ ಅನುಭವಿಸಿದ ಸಿನಿಮಾ ಅದು. ನನ್ನ ಕರಿಯರ್​ಗೆ ದೊಡ್ಡ ಬ್ರೇಕ್ ನೀಡಿದ್ದೂ ಅದೇ ಸಿನಿಮಾ. ಬೇರೆಯವರೆಲ್ಲ ಪುಟ್ಟಣ್ಣ ಕಣಗಾಲ್ ಗುರುವಿದ್ದಂತೆ ಎಂದು ಹೇಳಿಕೊಳ್ಳುತ್ತಾರೆ. ಉಪೇಂದ್ರ ನನ್ನ ಪಾಲಿನ ಪುಟ್ಟಣ್ಣ ಕಣಗಾಲ್ ಇದ್ದಂತೆ. ಸಿನಿಮಾದ ಗಂಧ ಗಾಳಿ ಗೊತ್ತಿಲ್ಲದ ನನಗೆ, ಬೈದು ಡೈಲಾಗ್​ಗಳನ್ನು ಹೇಳಿಕೊಟ್ಟಿದ್ದು ಉಪೇಂದ್ರ. ಆಗ ಕಷ್ಟ ಅನಿಸಿದರೂ, ಈಗ ಅದೆಲ್ಲವೂ ಸಂತಸದ ಕ್ಷಣಗಳೆಂಬಂತೆ ಭಾಸವಾಗುತ್ತದೆ. ಬೆಂಕಿ, ರಕ್ತ, ಗ್ಲಾಸ್ ಜತೆಗೆಲ್ಲ ಆಟ ಆಡಿದ್ದೇನೆ. ಅದರಿಂದಾಗಿಯೇ ವಿಲ್ ಪವರ್ ಹೆಚ್ಚಾಯ್ತು. ಆಗ ಪಟ್ಟ ಕಷ್ಟ ಮುಂದಿನ ಸಿನಿಮಾಗಳಿಗೆ ಅನುಕೂಲ ಆಯಿತು. ಸಿನಿಮಾ ಬಿಡುಗಡೆ ಆದಮೇಲೆ ಇಡೀ ದೇಶವೇ ಸಿನಿಮಾ ಬಗ್ಗೆ ಮಾತನಾಡಿತು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ’ ಎಂದು ಆ ದಿನಗಳನ್ನು ನೆನೆಯುತ್ತಾರೆ ಪ್ರೇಮಾ. ನಟನೆ ಬೇಡ; ರಿಯಲ್ ಆಗಿರಿ

ಚಿತ್ರದ ಇನ್ನೊಂದು ಹೈಲೈಟ್ ಎಂದರೆ, ಆಗಿನ ಕಾಲಕ್ಕೆ ರೌಡಿಸಂನಲ್ಲಿ ಗುರುತಿಸಿಕೊಂಡವರು ನಟಿಸಿದ್ದು. ಈ ಕುರಿತು ಮಾತನಾಡುವ ಉಪೇಂದ್ರ, ‘ರೌಡಿಸಂ ಬೇಡ ಅನ್ನೋಕೆ ಮೂರು ಪಾತ್ರಗಳ ಅವಶ್ಯಕತೆ ಇತ್ತು. ಆ ಸಂದೇಶವನ್ನು ನಿಜವಾದ ರೌಡಿಗಳಿಂದಲೇ ಹೇಳಿಸಿದರೆ ಹೇಗೆ ಎಂಬ ಐಡಿಯಾ ಬಂತು. ಆದರೆ, ಅದು ಸಾಧ್ಯವಾ ಎಂಬ ಪ್ರಶ್ನೆ ಇತ್ತು. ಕೊನೆಗೆ ಕೆಲವರ ಮೂಲಕ ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಅಹ್ಮದ್ ಅವರ ಭೇಟಿಯಾಯಿತು. ಅವರಿಗೆ ಕಥೆ ಹೇಳಿದಾಗ, ನಾವು ಸಹ ಆಕ್ಟ್ ಮಾಡಬೇಕಾ ಎಂದು ಥ್ರಿಲ್ ಆದರು. ನಟನೆ ಬೇಡ, ನೈಜವಾಗಿರಿ ಅಂತ ಹೇಳಿ, ಅವರಿಂದ ಪಾತ್ರ ಮಾಡಿಸಲಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಉಪೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net