

ದೂರದರ್ಶನದಲ್ಲಿ ಹಳೆಯ ಜನಪ್ರಿಯ ಧಾರಾವಾಹಿಗಳೆಲ್ಲಾ ಒಂದೊಂದಾಗಿ ಮರುಪ್ರಸಾರವಾಗುತ್ತಿದೆ. ಅಷ್ಟೇ ಅಲ್ಲ, ‘ರಾಮಾಯಣ’ ಧಾರಾವಾಹಿಯನ್ನು ಕಳೆದ ಶನಿವಾರ ಬೆಳಿಗ್ಗೆ 3.4 ಕೋಟಿ ಜನ ನೋಡಿದರೆ, ಭಾನುವಾರ 5.2 ಕೋಟಿ ಜನ ನೋಡಿ ಹೊಸ ದಾಖಲೆ ಬರೆದಿದ್ದಾರೆ. ಈ ಎರಡೂ ದಿನಗಳಿಂದ ನಾಲ್ಕು ಎಪಿಸೋಡ್‌ಗಳು ಒಟ್ಟಾರೆ 17 ಕೋಟಿ ಸಲ ವೀಕ್ಷಣೆಯಾಗಿದೆ.
ಈಗ್ಯಾಕೆ ಈ ಮಾತು ಎಂದರೆ, ಕನ್ನಡದಲ್ಲೂ ಇನ್ನು ಹಳೆಯ ಕಾರ್ಯಕ್ರಮಗಳ ಮರುಪ್ರಸಾರ ಸದ್ಯದಲ್ಲೇ ಪ್ರಾರಂಭವಾಗಲಿದೆ. ಈಗಾಗಲೇ ಕನ್ನಡದ ವಾಹಿನಿಯವರು ಇಟ್ಟುಕೊಂಡಿದ್ದ ಬ್ಯಾಂಕಿಂಗ್ ಮುಗಿಯುತ್ತಾ ಬಂದಿದೆ. ಲಾಕ್‌ಡೌನ್ ಇರುವುದರಿಂದ ಹೊಸ ಎಪಿಸೋಡ್‌ಗಳ ಚಿತ್ರೀಕರಣ ಸಾಧ್ಯವಾಗದೇ, ಹಳೆಯ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳ ಮರುಪ್ರಸಾರ ಅನಿವಾರ್ಯವಾಗಿದೆ. ಈಗಾಗಲೇ ಜೀ ಕನ್ನಡದ ಜನಪ್ರಿಯ ಧಾರಾವಾಹಿಯಾದ ‘ಜೊತೆಜೊತೆಯಲಿ’ ಇಂದಿನಿಂದ ಮರುಪ್ರಸಾರವಾಗಲಿದೆ. ಈ ಹಿಂದೆ ಪ್ರತಿ ರಾತ್ರಿ ಅರ್ಧ ತಾಸು ಪ್ರಸಾರವಾಗುತಿತ್ತು. ಇಂದಿನಿಂದ ಸುದೀರ್ಘ ಎರಡು ಗಂಟೆ ಕಾಲ ನಾಲ್ಕು ಕಂತುಗಳು ಪ್ರಸಾರವಾಗಲಿದೆ.
ಇದಲ್ಲದೆ ಸೋಮವಾರದಿಂದ ಜೀ ಕನ್ನಡದಲ್ಲಿ ಇನ್ನಷ್ಟು ಹಳೆಯ ಕಾರ್ಯಕ್ರಮಗಳು ಹೊಸದಾಗಿ ಪ್ರಸಾರವಾಗಲಿದೆ. ‘ಸರಿಗಮಪ - ಸೀಸನ್ 15’ (ಬೆಳಿಗ್ಗೆ 9.30ಕ್ಕೆ) , ‘ಡ್ರಾಮಾ - ಸೀಸನ್ 1’ (ಬೆಳಿಗ್ಗೆ 11ಕ್ಕೆ) , ‘ಕಾಮಿಡಿ ಕಿಲಾಡಿಗಳು - ಸೀಸನ್ 1’ (ರಾತ್ರಿ 10ಕ್ಕೆ) ಮತ್ತು ‘ಚೋಟಾ ಚಾಂಪಿಯನ್ - ಸೀಸನ್ 1’ (ರಾತ್ರಿ 11.30ಗೆ) ಮುಂತಾದ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಹಳೆಯ ಸೀಸನ್‌ಗಳನ್ನು ಪ್ರೇಕ್ಷಕರು ಮತ್ತೆ ನೋಡಬಹುದಾಗಿದೆ. ಇದಲ್ಲದೆ ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಒಂದು ಹೊಸ ಚಲನಚಿತ್ರ ಪ್ರಸಾರವಾಗಲಿದ್ದು, ಇದರ ಜತೆಗೆ ರಾತ್ರಿ ಆರರಿಂದ ಎಂಟರವರೆಗೆ ‘ಜೊತೆಜೊತೆಯಲಿ’ ಪ್ರಸಾರವಾಗಲಿದೆ.