ನಾನು ಹೃದಯವಾದರೆ, ನೀವು ಬಡಿತ: ನಟ ರವಿಚಂದ್ರನ್​ ಹೀಗೆಂದದ್ದು ಯಾರಿಗೆ?

hamsa ravi
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಹಾಗೂ ಮಧುರ ಗೀತೆಗಳನ್ನು ಸಂಯೋಜಿಸುವುದರ ಮೂಲಕ ಹೆಚ್ಚು ಪ್ರಸಿದ್ಧಿಯಾದವರು ಸಂಗೀತ ನಿರ್ದೇಶಕ ಹಂಸಲೇಖ. ಕನ್ನಡದ 324 ಚಿತ್ರಗಳೂ ಸೇರಿ ತೆಲುಗು, ತಮಿಳು ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ ಖ್ಯಾತಿ ಅವರಿಗಿದೆ. ಅದರಲ್ಲೂ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿಯು ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿತ್ತು. ಅಂತಹ ದೈತ್ಯ ಪ್ರತಿಭೆ ಹಂಸಲೇಖ ಇದೀಗ ಮತ್ತೊಂದು ಹೊಸ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಿದ್ದಾರೆ. ‘ಓಕೆ’ ಎಂಬ ಹೊಸ ಚಿತ್ರವನ್ನು ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ಧರಿಸುತ್ತಿದ್ದಾರೆ. ಸೋಮವಾರ (ಜೂ.23) ಹಂಸಲೇಖ ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ‘ಓಕೆ’ ಸಿನಿಮಾ ಟೈಟಲ್ ಘೋಷಣೆ ಮಾಡಲಾಯಿತು. ನಟ ರವಿಚಂದ್ರನ್ ಕಾರ್ಯಕ್ರಮಕ್ಕೆ ಆಗಮಿಸಿ, ಹಂಸಲೇಖರಿಗೆ ಹುಟ್ಟುಹಬ್ಬ ಹಾಗೂ ಡೈರೆಕ್ಷನ್ ಸಾಹಸಕ್ಕೆ ಶುಭಕೋರಿದರು. ‘ಮೊದಲಿಗೆ ನಿಮ್ಮನ್ನು (ಹಂಸಲೇಖ) ನೋಡಿದ ತಕ್ಷಣ ನನಗೆ ನೆನಪಾಗುವುದು ನೀವು ರಾಜು ಅಂತಾ. ಬಳಿಕ ರಾಜನಾಗಿ ನನ್ನನ್ನು ಪರದೆ ಮೇಲೆ ಮೆರವಣಿಗೆ ಮಾಡಿಸಿದ್ದು ನೀವೆನೇ. ನಿಮ್ಮ ಹಾಡುಗಳು ನನ್ನನ್ನು ಕ್ರೇಜಿ ಕ್ಯಾರೆಕ್ಟರ್ ಆಗಿ ಸೃಷ್ಟಿಸಿದ್ದವು. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಓಡುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ, ಎಲ್ಲ ಸಿನಿಮಾಗಳು ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಆದರೆ, ನಿಜವಾದ ಸಕ್ಸಸ್ ಎಂದರೆ 86ರ ಕಾಲದಲ್ಲಿ ನಾವು ಕೊಟ್ಟಿದ್ದೆವೆಲ್ಲ ಅದೇ ಸಕ್ಸಸ್. ಆದರೆ, ಒಂದು ದಿನಾನೂ ನಾವು ಸಕ್ಸಸ್ ಹೆಗಲು ಮೇಲೆ ಹಾಕಿಕೊಂಡು ಹೋಗಲಿಲ್ಲ. ಒಂದರ ಬಳಿಕ ಒಂದು ಸಿನಿಮಾ ಮಾಡುತ್ತಿದ್ದೆವು. ಹಾಗಾಗಿ, ನಮ್ಮದು ಸಿನಿಮಾ ಪ್ರಯಾಣ ಹಂಗೆ ಮುಂದುವರಿಯುತ್ತಿತ್ತು' ಎಂದು ಖುಷಿ ಹಂಚಿಕೊಂಡರು.

ಇವತ್ತು ಸ್ನೇಹ, ಸಿನಿಮಾ ಹಾಗೂ ಮಾತಿನಲ್ಲಿ ಲೆಕ್ಕಾಚಾರ ಇರಬೇಕಾದರೆ, ನನ್ನ ಹಾಗೂ ಹಂಸಲೇಖರ ಮಧ್ಯೆ ಯಾವುದೇ ಲೆಕ್ಕಾಚಾರ ಇರಲಿಲ್ಲ. ಎಂದಿಗೂ ನಾವು ಲಾಭ-ನಷ್ಟ ಹಾಗೂ ಫಲಿತಾಂಶದ ಬಗ್ಗೆ ಯೋಚಿಸಿರಲಿಲ್ಲ. ನಾವಿಬ್ಬರೂ ಒಂದಿನ ಸಡನ್​ ಆಗಿ ದೂರವಾಗಿಬಿಟ್ಟೆವೂ. ಆದರೆ, ಇವತ್ತಿಗೂ ಕಾರಣ ಸರಿಯಾಗಿ ಗೊತ್ತಿಲ್ಲ.  ನಮಗೆ ನಾವೇ ಕಾರಣ ಕೊಟ್ಟುಕೊಂಡು ತಿರಗಾಡುತ್ತಿದ್ದೇವೆ ಅಷ್ಟೇ. ಸಮಯವೇ ನಮ್ಮನ್ನು ದೂರ ಮಾಡಿತೋ ಗೊತ್ತಿಲ್ಲ.  ಆಗ ನಾನು ಬರೆಯಬೇಕಿತ್ತೇನೋ? ಸಂಗೀತ ಮಾಡಬೇಕಿತ್ತೇನೋ? ಆಗ ದೂರವಾಗಿದ್ದವರು ಮತ್ತೆ ಸೇರಲಿಲ್ಲ. ಮತ್ತೇ ನಾವು ನಾವಿಬ್ಬರೂ ಸೇರಲು ಮತ್ತೊಬ್ಬ ಎನ್​. ಎಸ್.ರಾವ್ ಬರಬೇಕು ಅಷ್ಟೇ.  ಹಂಸಲೇಖರನ್ನು ನಮಗೆ ಎನ್.ಎಸ್.ರಾವ್ ಪರಿಚಯಿಸಿದರು. ಆಗ ಗಿಟಾರ್ ಹಿಡಿದುಕೊಂಡು ಬಂದಿದ್ದರು. ಆ ಗಿಟಾರ್ ಹಿಡಿದುಕೊಂಡು ನಾನು ಹೊರಟೆ ಅಷ್ಟೇ. ಇನ್ನು, ನಾನು ಹೃದಯವಾದರೆ, ನೀವು ಅದರ ಬಡಿತ ಹಾಗೂ ರಿದಂ. ಇಷ್ಟು ದಿನ ನಾವು ಆ್ಯಕ್ಷನ್ ಹೇಳುವಾಗ, ನೀವು ರಿಯಾಕ್ಟ್ ಮಾಡುತ್ತಿದ್ದೀರಿ. ಈಗ ನಾವು ರಿಯಾಕ್ಟ್ ಮಾಡುವ ಸಮಯ ಬಂದಿದೆ. ಶೀರ್ಷಿಕೆ ‘ಓಕೆ’ ಎಂದು ಇಟ್ಟಿದ್ದೀರಿ, ಅದರ ಕೆಳಗಡೆ ಸ..ರಿ.. ಸೇರಿಸಿ. ನಿಮಗೆ ಸರಿಹೊಂದುತ್ತದೆ’ ಎಂದು ರವಿಚಂದ್ರನ್​, ಹಂಸಲೇಖರಿಗೆ ಶುಭ ಕೋರಿದರು.

ಕನ್ನಡದ ಮಣ್ಣಿನ ಕಥೆಗಳು ಬರಲಿ: ಬಯಸಿದ ಎಲ್ಲ ಕನಸುಗಳನ್ನು ಕನ್ನಡ ಚಿತ್ರರಂಗ ಈಡೇರಿಸಿದ್ದು, ನಿರ್ದೇಶನ ಒಂದು ಬಾಕಿಯಿತ್ತು. ಇದೀಗ ಅದಕ್ಕೆ ಮುಂದಾಗಿದ್ದೇನೆ ಎಂದು ಮಾತು ಆರಂಭಿಸಿದ ಹಂಸಲೇಖ, ‘ಕನ್ನಡದ ಸ್ವಂತಿಕೆ ಚಿತ್ರಗಳನ್ನು ನಿರ್ಮಾಣ ಮಾಡುವ ಆಂದೋಲನ ಇದು. ಆದೀಬ್ ಆಖ್ತರ್ ಬರೆದ ‘ಪಂಜರ’ ಎಂಬ ಕಥಾ ಸಂಕಲನದ ಒಂದು ಕಥೆಯನ್ನು ಚಿತ್ರವಾಗಿಸಲಾಗುತ್ತಿದೆ. ಭ್ರೂಣ ಹತ್ಯೆ ಹಾಗೂ ಪತ್ತೆಯ ಸುತ್ತ ಈ ಕಥೆಯಿದ್ದು, ಮುಂದಿನ ದಿನಗಳಲ್ಲಿ ತಾರಾಗಣವನ್ನು ಪರಿಚಯಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net