

‘ಸಮಾಜದಲ್ಲಿ ಹೆಣ್ಣಿನ ಮೇಲೆ ಸಾಕಷ್ಟು ಶೋಷಣೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ತಮಗಾದ ಅನ್ಯಾಯದ ವಿರುದ್ಧ ಹೋರಾಡುವವರು ಕಡಿಮೆ. ಸಮಾಜದಲ್ಲಿ ಶೋಷಣೆಗೆ ಒಳಗಾದ ಹೆಣ್ಣು ಹೋರಾಟದ ಮೂಲಕ ಒಳ್ಳೆಯ ನೆಲೆ ಕಂಡುಕೊಂಡು ತಾನು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸುವುದೇ ಚಿತ್ರಕಥೆ ಎಂದರು ‘ಓಜಸ್’ ಚಿತ್ರದ ನಿರ್ದೇಶಕ ಸಿ.ಜೆ. ವರ್ಧನ್.
ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾ ಬಂದುಹೋಗಿದೆ. ಈ ವರ್ಗದ ಚಿತ್ರಗಳಿಗೆ ಹೊಸ ಸೇರ್ಪಡೆ ‘ಓಜಸ್’. ಸಿ.ಜೆ. ವರ್ಧನ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ, ರಜತ್ ರಘುನಾಥ ಹಾಗೂ ಡಾ. ಎಡ್ವರ್ಡ್ ಡಿಸೋಜಾ ಬಂಡವಾಳ ಹೂಡಿದ್ದಾರೆ.
‘‘ಓಜಸ್’ ಸಂಸ್ಕೃತ ಪದ. ಕನ್ನಡದಲ್ಲಿ ‘ಓಜಸ್’ ಎಂದರೆ ಬೆಳಕು. ಹೆಣ್ಣು ಮಗುವಿಗೆ ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಆದರೆ ಅವರು ದೊಡ್ಡವರಾದ ಮೇಲೆ ನಿರ್ಲಕ್ಷ್ಯಕ್ಕೆ, ಶೋಷಣೆಗೆ ಒಳಗಾಗುತ್ತಾರೆ. ಹೆಣ್ಣು ತಮಗಾದ ಅನ್ಯಾಯದಿಂದ ಎಚ್ಚೆತ್ತು ಸಮಾಜವನ್ನು ಹೇಗೆ ಸರಿಮಾಡುತ್ತಾಳೆ ಎನ್ನುವುದು ಕಥಾಹಂದರ.
ಚಿತ್ರದಲ್ಲಿ ಒಂದು ಹಾಡು ಇದೆ, ಖಳನಟ ಇದ್ದರೂ ಕ್ರೂರತೆ ಇಲ್ಲ. ತಮಗಾದ ಅನ್ಯಾಯದ ವಿರುದ್ಧ ಹೋರಾಡುವ, ಅನ್ಯಾಯಗಳನ್ನು ಪ್ರಶ್ನಿಸುವ ಶಕ್ತಿಯನ್ನು ಈ ಚಿತ್ರ ಪ್ರತಿಯೊಬ್ಬರಲ್ಲಿ ತುಂಬುತ್ತದೆ’ ಎಂದರು ನಿರ್ದೇಶಕರು. ‘ಓಜಸ್ ವಿಭಿನ್ನ ಸಿನಿಮಾ, ನನ್ನದು ವಿಶೇಷ ಪಾತ್ರ’ ಎನ್ನುವ ನಟ ಯತಿರಾಜ್, ಖಳನಟನಾಗಿ ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
‘ಒಳ್ಳೆಯ ಪಾತ್ರ ಸಿಕ್ಕಿದ್ದು ಖುಷಿ ತಂದಿದೆ. ನನ್ನ ಈ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ ಪಾತ್ರ ಇದು. ಪ್ರಮುಖ ಪಾತ್ರ ನನ್ನದು. ಜಿಲ್ಲಾಧಿಕಾರಿ ಆಗಿ ದುಷ್ಟರನ್ನು ಹತ್ತಿಕ್ಕಿ, ಕೆಟ್ಟ ವ್ಯವಸ್ಥೆ ತೊಲಗಿಸಲು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದರು ನಟಿ ನೇಹಾ ಸಕ್ಸೇನಾ. ‘ನಿರ್ದೇಶಕ ವರ್ಧನ್ ಉತ್ತಮ ಕಥೆ ಮಾಡಿದ್ದರು. ನಾನು ಮತ್ತು ಡಾ. ಎಡ್ವರ್ಡ್ ಡಿಸೋಜಾ ಈ ಚಿತ್ರ ನಿರ್ಮಾಣ ಮಾಡಿದ್ದೇವೆ.
ಅವರು ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ. ಚಿತ್ರ ಎಲ್ಲರಿಗೂ ಇಷ್ಟ ಆಗುತ್ತದೆ’ ಎಂದರು ನಿರ್ವಪಕರಲ್ಲಿ ಒಬ್ಬರಾದ ರಜತ್ ರಘುನಾಥ. ಭವ್ಯಾ, ಡಿಂಗ್ರಿ ನಾಗರಾಜ್ ಚಿತ್ರದ ಪ್ರಮುಖ ತಾರಾವರ್ಗದಲ್ಲಿದ್ದಾರೆ. ಫೆ.7ರಂದು ಚಿತ್ರ ಬಿಡುಗಡೆ ಆಗಲಿದೆ.