ನಟಿಯರು ಮಾತ್ರವಲ್ಲ ಲೈಟ್​ ಬಾಯ್​ ಕೂಡ ಬಿಟ್ಟಿಲ್ಲ! ಸಿನಿ ಇಂಡಸ್ಟ್ರಿಯ ಕರಾಳ ಮುಖ ಅನಾವರಣ

Ligh boy
Published on

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ.

ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು.

ಚಿತ್ರರಂಗದಲ್ಲಿರುವಷ್ಟು ಕಾಸ್ಟಿಂಗ್ ಕೌಚ್ ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ. ಶಿಕ್ಷಕರು, ವೈದ್ಯರು ಹೀಗೆ ಯಾವುದೇ ಕ್ಷೇತ್ರದಲ್ಲೂ ಈ ರೀತಿ ಇಲ್ಲ. ಈ ಕಾರಣದಿಂದಲೇ ನಟಿಯರು ಅಂದರೆ ಜನರು ಬೇರೆ ರೀತಿಯಲ್ಲಿ ನೋಡುತ್ತಾರೆ. ಶೂಟಿಂಗ್​ ಸೆಟ್​ನಲ್ಲಿ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತವೆ ಮತ್ತು ಮಹಿಳೆಯರು ತಮ್ಮ ನೋವನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದೇ ಮೌನವಾಗೇ ನರಳುತ್ತಾರೆ. ದೌರ್ಜನ್ಯದ ವಿರುದ್ಧ ದೂರು ನೀಡಿದರೆ, ಆ ನಂತರ ಎದುರಿಸುವ ಪರಿಣಾಮಗಳು ಕೂಡ ತುಂಬಾ ಗಂಭೀರವಾಗಿರುತ್ತದೆ.

ದೌರ್ಜನ್ಯ ವಿರುದ್ಧ ದೂರು ನೀಡಿದರೆ ಜೀವ ಬೆದರಿಕೆ ಹಾಕುತ್ತಾರೆ ಎಂದು ಹಲವರು ಹೇಮಾ ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ. ದೂರು ನೀಡುವ ಸಂತ್ರಸ್ತರಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಜೀವ ಬೆದರಿಕೆ ಇದೆ. ದೂರು ನೀಡಿದ ಮರುದಿನವೇ ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ದಾಳಿಗೆ ಗುರಿಯಾಗುತ್ತೀರಿ. ಸಾಮಾಜಿಕ ಜಾಲತಾಣಗಳಲ್ಲಿ ನಟಿಯರನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಲಾಗುತ್ತದೆ. ಅಶ್ಲೀಲ ಚಿತ್ರಗಳು ಮತ್ತು ಕೊಳಕು ಕಾಮೆಂಟ್‌ಗಳನ್ನು ಹರಡಿ ಹೆಸರನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತವೆ. ದೂರು ನೀಡುವುದಂತೂ ತುಂಬಾ ಅಪಾಯಕಾರಿ. ಏಕೆಂದರೆ ಹೆಚ್ಚಿನವರು ಬಹಳ ಪ್ರಭಾವಶಾಲಿಯಾಗಿದ್ದಾರೆ ಎಂದು ಹೇಮಾ ಸಮಿತಿ ವರಿಯಲ್ಲಿ ಉಲ್ಲೇಖವಾಗಿದೆ.

ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರು ಮಾತ್ರವಲ್ಲ ಲೈಟ್​ ಬಾಯ್​ಗಳ ಮೇಲೂ ಶೋಷಣೆ ನಡೆದಿದೆ. ಸೂಪರ್‌ಸ್ಟಾರ್‌ಗೆ ಸಲಾಂ ಹೊಡೆಯಲಿಲ್ಲ ಅಂತಾ ಲೈಟ್ ಬಾಯ್‌ನನ್ನು ಕೆಲಸದಿಂದಲೇ ವಜಾಗೊಳಿಸಿದ ಪ್ರಸಂಗವೂ ನಡೆದಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ 10 ರಿಂದ 15 ಪುರುಷರ ಅನಧಿಕೃತ ಗುಂಪಿದ್ದು, ಮಾಫಿಯಾ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ತಮ್ಮ ವಿರುದ್ಧ ಮಾತನಾಡಿದರೆ ಅಕ್ರಮವಾಗಿ ನಿಷೇಧ ಹೇರುತ್ತಾರೆ. ಈ ಗುಂಪಿನಲ್ಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಕೆಲ ನಟರು ಕೂಡ ಸೇರಿದ್ದಾರೆ. ಇವರೆಲ್ಲರೂ ಇಡೀ ಉದ್ಯಮವನ್ನು ನಿಯಂತ್ರಿಸುತ್ತಾರೆ. ತಮ್ಮ ಆದೇಶಗಳನ್ನು ಅನುಸರಿಸದವರಿಗೆ ಬೆದರಿಕೆ ಹಾಕುತ್ತಾರೆ. ಹಲವಾರು ಮಂದಿ ಕ್ಷುಲಕ ಕಾರಣಗಳಿಗಾಗಿ ಈ ಮಾಫಿಯಾದಿಂದ ಅನಧಿಕೃತ ನಿಷೇಧವನ್ನು ಎದುರಿಸಿದ್ದಾರೆ ಎಂದು ಹೇಮಾ ವರದಿ ಹೇಳುತ್ತದೆ.

ಮಹಿಳೆಯರು ಸಿನಿಮಾರಂಗಕ್ಕೆ ಬರುವುದು ಹಣ ಮಾಡಲು ಮತ್ತು ಯಾವುದಕ್ಕೂ ಶರಣಾಗುತ್ತಾರೆ ಎಂಬ ಸಾಮಾನ್ಯ ಊಹೆ ಇದೆ. ಹೆಣ್ಣು ಸಿನಿಮಾಗೆ ಬರಲು ಕಲೆ ಮತ್ತು ನಟನೆಯ ಮೇಲೆ ಅವರಿಗಿರುವ ಅಭಿರುಚಿಯೇ ಕಾರಣ ಎಂದು ಸಿನಿಮಾದಲ್ಲಿರುವ ಪುರುಷರು ಊಹಿಸುವುದಿಲ್ಲ. ಖ್ಯಾತಿ ಮತ್ತು ಹಣಕ್ಕಾಗಿ ಬರುತ್ತಾರೆ ಮತ್ತು ಚಲನಚಿತ್ರದಲ್ಲಿ ಅವಕಾಶ ಪಡೆಯಲು ಯಾವುದೇ ವ್ಯಕ್ತಿಯೊಂದಿಗೆ ಮಲಗುತ್ತಾರೆ ಎಂಬ ತಪ್ಪು ಅನಿಸಿಕೆ ಇದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net