

ಬೆಂಗಳೂರು: ‘ಆದರೆ, ಕ್ರಿಕೆಟ್ ಅಲ್ಲ..’ ಎಂಬ ಟ್ಯಾಗ್ಲೈನ್ ನೀಡಿ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾ ನಿರ್ದೇಶಿಸಿರುವ ನಾಗತಿಹಳ್ಳಿ ಚಂದ್ರಶೇಖರ ಅವರು, ಈಗ ತಮ್ಮ ಸಿನಿಮಾಗೆ ಕ್ರಿಕೆಟ್ ಟಚ್ ಕೊಟ್ಟಿದ್ದಾರೆ.
ಅಂದರೆ, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾದ ‘ಜೈ ಜೈ ಜನಗಣಮನ’ ಎಂಬ ಗೀತೆಯನ್ನು ಅವರು ಖ್ಯಾತ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ ಕಾಮತ್ ಹಾಗೂ ಹಲವಾರು ಮಕ್ಕಳು ಭಾಗವಹಿಸಿರುವ ಈ ಹಾಡನ್ನು ಭಾರತದಾದ್ಯಂತ ಚಿತ್ರೀಕರಿಸಲಾಗಿದೆ. ಇದಕ್ಕೆ ನಾಗತಿಹಳ್ಳಿ ಚಂದ್ರಶೇಖರ ಅವರೇ ಸಾಹಿತ್ಯ ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇದೇ ಚಿತ್ರದಲ್ಲಿನ ಕನ್ನಡ ಕುರಿತಾದ ಇನ್ನೊಂದು ಗೀತೆಯನ್ನು ಇನ್ಪೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರಿಂದ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿಸಿದ್ದರು. ಇತ್ತೀಚೆಗೆ ಚಿತ್ರದ ಟ್ರೇಲರ್ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಬಿಡುಗಡೆ ಮಾಡಿದ್ದರು. ಸುಮಲತಾ, ಅನಂತನಾಗ್, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ, ಶಿವಮಣಿ, ಗಿರಿರಾಜ್ ಮತ್ತು ಹಲವು ಬ್ರಿಟಿಷ್ ಕಲಾವಿದರು ಅಭಿನಯಿಸಿರುವ ಈ ಸಿನಿಮಾ ಜ. 24ರಂದು ಬಿಡುಗಡೆ ಆಗಲಿದೆ.