ಸ್ಯಾಂಡಲ್​ವುಡ್​ನಲ್ಲಿ ನೋರಾ ನರ್ತನ?

noora jan 15 2020
Published on

ಬೆಂಗಳೂರು: ಕನ್ನಡ ಸಿನಿಮಾಗಳ ಐಟಂ ಹಾಡುಗಳಿಗೆ ಬಾಲಿವುಡ್ ನಟಿಯರು ಸೊಂಟ ಬಳುಕಿಸಿ ಹೋದ ಉದಾಹರಣೆಗಳು ಸಾಕಷ್ಟಿವೆ. ಮಲ್ಲಿಕಾ ಶೆರಾವತ್ ಅವರಿಂದ ಹಿಡಿದು ಸನ್ನಿ ಲಿಯೋನ್ ವರೆಗೂ ಹಲವರು ಹೆಜ್ಜೆ ಹಾಕಿ ಹೋಗಿದ್ದಾರೆ. ಈಗ ಬಾಲಿವುಡ್​ನಲ್ಲಿ ಐಟಂ ಹಾಡುಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ನಟಿ ನೋರಾ ಫತೆಹೀ ಕನ್ನಡಕ್ಕೆ ಆಗಮಿಸುವ ತಯಾರಿಯಲ್ಲಿದ್ದಾರೆ.

ಹೌದು, ನಿರ್ವಪಕರಾದ ಶೈಲೇಂದ್ರ ಬಾಬು, ರವಿ ಗರಣಿ ಮತ್ತು ಎಂ.ಕೆ. ಮಧುಗಿರಿ ನಿರ್ವಣದಲ್ಲಿ ‘ಗೋವಿಂದ ಗೋವಿಂದ’ ಸಿನಿಮಾ ತಯಾರಾಗುತ್ತಿದೆ. ಶೈಲೇಂದ್ರ ಬಾಬು ಪುತ್ರ ಸುಮಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಚಿತ್ರೀಕರಣವೂ ಶುರುವಾಗಿದೆ. ಇದೇ ಚಿತ್ರದ ಐಟಂ ಸಾಂಗ್​ನಲ್ಲಿ ನೋರಾ ಜತೆ ಸುಮಂತ್ ಡಾನ್ಸ್ ಮಾಡಲಿದ್ದಾರೆ. ‘ಚಿತ್ರದಲ್ಲಿನ ಐಟಂ ಸಾಂಗ್​ಗೆ ಪರಭಾಷೆ ಬೆಡಗಿಯನ್ನೇ ಕರೆತರಬೇಕು ಎಂಬ ಯೋಚನೆ ಇತ್ತು. ಅದರಂತೆ, ಬಾಲಿವುಡ್ ನಟಿ ನೋರಾ ಅವರನ್ನು ಈಗಾಗಲೇ ಅಪ್ರೋಚ್ ಮಾಡಿದ್ದೇವೆ. ಸದ್ಯಕ್ಕೆ ಅವರಿಂದ ಸಕಾರಾತ್ಮಕ ಉತ್ತರ ಬಂದಿದೆ. ಇನ್ನು ಕೆಲವು ದಿನಗಳಲ್ಲಿ ಅಂತಿಮ ನಿರ್ಧಾರ ತಿಳಿಸಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಚಿತ್ರದ ನಿರ್ದೇಶಕ ತಿಲಕ್.

ಈ ಹಿಂದೆ ಧಾರಾವಾಹಿ ನಿರ್ದೇಶನ ಮಾಡಿದ ಅನುಭವ ಇರುವ ತಿಲಕ್, ‘ಗೋವಿಂದ ಗೋವಿಂದ’ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿದ್ದಾರೆ. ಸುಮಂತ್​ಗೆ ನಾಯಕಿಯಾಗಿ ಕವಿತಾ ಗೌಡ ಜೋಡಿಯಾಗಿದ್ದು, ಭಾವನಾ ಮೆನನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕನ ಸ್ನೇಹಿತರಾಗಿ ಪವನ್, ವಿಜಯ್ ಚೆಂಡೂರ್ ನಟಿಸುತ್ತಿದ್ದು, ಕಾಮಿಡಿ ಡ್ರಾಮಾ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net