Nodidavaru Yenanthare Review: ಪ್ರ"ಬುದ್ಧ'ನಾಗುವತ್ತ ಸಿದ್ಧಾರ್ಥನ ಯಾನ

ZX
Published on

ಚಿತ್ರ: ನೋಡುವವರು ಏನಂತಾರೆ

ನಿರ್ದೇಶನ: ಕುಲದೀಪ್​ ಕಾರ್ಯಪ್ಪ

ತಾರಾಗಣ: ನವೀನ್​ ಶಂಕರ್​, ಅಪೂರ್ವ ಭಾರದ್ವಾಜ್​, ಪದ್ಮಾವತಿ ರಾವ್​, ಶ್ವೇತಾ ಶ್ರೀನಿವಾಸ್​, ರಾಜೇಶ್​ ಮರಿಯಮ್ಮನಹಳ್ಳಿ, ಸೋನು ಗೌಡ ಮತ್ತಿತರರು.

| ಹರ್ಷವರ್ಧನ್​ ಬ್ಯಾಡನೂರು

"ನಾನು ನನ್ನ ಕಳ್ಕೊಳ್ಳೋಕೆ ಹೊರಟಿದ್ದೀನಿ. ಪೂರ್ತಿಯಾಗಿ ಕಳ್ಕೊಂಡಮೇಲೆ ಮಧ್ಯದಾರೀಲಿ ನನಗೆ ನಾನೇ ಎಲ್ಲೋ ಸಿಕ್ತೀನಿ ಅನ್ಸುತ್ತೆ...' ಎಂದು ಅರಿವಿಲ್ಲದ ದಾರಿಯಲ್ಲಿ ಪರಿವೆಯಿಲ್ಲದೆ ಹೆಜ್ಜೆ ಹಾಕುತ್ತಾನೆ ಸಿದ್ಧಾರ್ಥ್​ ದೇವಯ್ಯ (ನವೀನ್​ ಶಂಕರ್​). ತನ್ನ ಎರಡನೇ ವಯಸ್ಸಿನಲ್ಲೇ ಕನಸುಗಳ ಬೆನ್ನತ್ತಿ ಅಮ್ಮ (ಪದ್ಮಾವತಿ ರಾವ್​) ಕುಟುಂಬ ತೊರೆದಿರುತ್ತಾಳೆ, ಎರಡು ತಿಂಗಳ ಹಿಂದಷ್ಟೇ ಎರಡು ವರ್ಷಗಳ ಪ್ರೀತಿಗೆ ತಿಲಾಂಜಲಿ ಹಾಡಿದೆ ಪ್ರೇಯಸಿ (ಸೋನು)... ಈ ಎರಡು ಟನೆಗಳಿಂದ ಮಾನಸಿಕವಾಗಿ ಛಿದ್ರನಾದ ಸಿದ್ಧಾರ್ಥನಿಗೆ ಬರಸಿಡಿಲಿನಂತೆ "ಅಪ್ಪ'ಳಿಸುವುದೇ ಸಾವಿನ ಸುದ್ದಿ. ತಂದೆಯ ಅಸ್ಥಿಯನ್ನು ನೀರಿಗೆ ಬಿಡುವಷ್ಟರಲ್ಲಿ ಅತ್ತ ಕೆಲಸ ಕೂಡ ಕೈಬಿಟ್ಟಿರುತ್ತದೆ. ಹೀಗೆ ನೊಂದು, ಬೆಂದವನು ಎಲ್ಲ ಪ್ರಶ್ನೆಗಳಿಗೂ ಅಮ್ಮನ ಬಳಿ ಉತ್ತರ ಸಿಗುತ್ತಾ ಅಂತ ಹೊರಡುತ್ತಾನೆ. ಎಲ್ಲಿಗೆ ಪಯಣ... ಯಾವುದೋ ದಾರಿ... ಆ ದಾರಿಯಲ್ಲಿ ಸಿಗುವವರೇ ಒಂದು ಕೈ ಇಲ್ಲದ ಮಾತಿನ ಮಲ್ಲಣ್ಣ (ರಾಜೇಶ್​), ಪಂಜರಕ್ಕೆ ಸೇರುವ ಮುನ್ನ ಸ್ವಾತಂತ್ರ$್ಯ ಸವಿಯಲು ಸ್ವಚ್ಛಂದವಾಗಿ ಹಾರುವ ಮಿಂಚುಳ್ಳಿ ನಾದಿಯಾ ಕೌಸರ್​ (ಅಪೂರ್ವ). ಅವರ ಜೀವನ ನೋಡಿ, ಅರಿತು, ಅವರಿಂದ ಕಲಿತು ಅಮ್ಮನ ಹುಡುಕಾಟ ಮುಂದುವರಿಸುವ ಸಿದ್ಧಾರ್ಥನಿಗೆ ಅಮ್ಮ ಸಿಗುತ್ತಾಳಾ? ಆತನ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಮುಂದೇನು? ಎಂಬುದೇ "ನೋಡಿದವರು ಏನಂತಾರೆ'...

ಏನಾದರೂ ಕಷ್ಟ ಎದುರಾದರೆ, ಸಮಸ್ಯೆ ತಲೆದೋರಿದರೆ ಎಲ್ಲ ಕಷ್ಟಗಳೂ ನಮಗೇ ಬರುತ್ತವಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುವುದುಂಟು. ಬಾಳಪಯಣದಲ್ಲಿ ಎಲ್ಲರಿಗೂ ಕಷ್ಟಗಳಿವೆ, ಅದರಾಚೆಗೂ, ಈಚೆಗೂ ಒಂದು ಸುಂದರ ಬದುಕಿದೆ ಎಂಬ ಉತ್ತಮ ಸಂದೇಶ ನೀಡಿದ್ದಾರೆ ನಿರ್ದೇಶಕ ಕುಲದೀಪ್​ ಕಾರ್ಯಪ್ಪ. ನಿಧಾನವಾಗಿ ಏರುವ ನಶೆಯಂತೆ ಸಿನಿಮಾ ಮನಸ್ಸಿನ ಒಳಗೆ ಇಳಿಯುತ್ತದೆ. ಎಷ್ಟು ಸುಂದರ ಬದುಕನ್ನು ನಾವೇಕೆ ಕ್ಲಿಷ್ಟಕರ ಮಾಡಿಕೊಂಡಿದ್ದೇವೆ ಅಂತ ಯೋಚಿಸುವಂತೆ ಮಾಡುತ್ತದೆ. ಸಿದ್ಧಾರ್ಥ ಬದುಕಿನ ಅರ್ಥ ತಿಳಿದು ಪ್ರ"ಬುದ್ಧ'ನಾಗುವ ಕಥೆಯಿದು. ಒಬ್ಬಂಟಿ ಪಯಣದಲ್ಲಿ ಜೀವನಸಾರ ಅನುಭವಿಸುವ ಸಿದ್ಧಾರ್ಥನಾಗಿ ನವೀನ್​ ಶಂಕರ್​ ಜೀವಿಸಿದ್ದಾರೆ. ಗೊಂದಲದ ಗ್ಲಾಮರ್​ ಗೊಂಬೆಯ ಪಾತ್ರದಲ್ಲಿ ಅಪೂರ್ವ ಗಮನ ಸೆಳೆಯುತ್ತಾರೆ. ಮಾತಿನ ಮಲ್ಲಣ್ಣ ರಾಜೇಶ್​ ಇಷ್ಟವಾಗುತ್ತಾನೆ. ಪದ್ಮಾವತಿ ರಾವ್​, ಶ್ವೇತಾ ಶ್ರೀನಿವಾಸ್​, ಸೋನು ಗೌಡ ಅಚ್ಚುಕಟ್ಟಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಿನಿಮಾ ನಿಧಾನ ಅನ್ನಿಸಿದರೂ, ಮನಸ್ಸನ್ನು ಮುಟ್ಟುವ ಪ್ರಧಾನ ಅಂಶವಿದೆ. ನನಗೇ ಯಾಕಿಷ್ಟು ಕಷ್ಟ ಅನ್ನೋರು "ನೋಡಿದವರು ಏನಂತಾರೆ'ಯನ್ನು ನೋಡಿ ಕಲಿಯುವಂಥದ್ದು ಸಾಕಷ್ಟಿದೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net