'ತ್ರಿಬ್ಬಲ್​ ರೈಡಿಂಗ್​', 'ವೇದ' ಬಿಟ್ಟರೆ ಸದ್ಯಕ್ಕೆ ಸ್ಟಾರ್​ ಚಿತ್ರಗಳೇ ಇಲ್ಲ ...

Star Films
Published on

ಬೆಂಗಳೂರು: ವರ್ಷ ಮುಗಿಯುತ್ತಾ ಬಂದಿದೆ. ಈಗಾಗಲೇ ಚಂದನವನದಲ್ಲಿ ಕಳೆದ 10 ತಿಂಗಳುಗಳಲ್ಲಿ 160 ಚಿತ್ರಗಳು ಬಿಡುಗಡೆಯಾಗಿವೆ. ಇದೊಂದೇ ತಿಂಗಳು 20 ಪ್ಲಸ್​ ಚಿತ್ರಗಳು ಬಿಡುಗಡೆಯಾಗುವುದಕ್ಕಿವೆ. ಡಿಸೆಂಬರ್​ನಲ್ಲಿ 20 ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಗೆ ಈ ವರ್ಷ ಒಟ್ಟಾರೆ 200 ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

ಮುಂದಿನ ಎರಡು ತಿಂಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದರೂ, ಸ್ಟಾರ್​ ಚಿತ್ರಗಳು ಮಾತ್ರ ಬೆರಳಣಿಕೆಯಷ್ಟಿವೆ ಎಂದರೆ ತಪ್ಪಿಲ್ಲ. ನ. 11ಕ್ಕೆ 'ಡಾರ್ಲಿಂಗ್​' ಕೃಷ್ಣ ಅಭಿನಯದ 'ದಿಲ್​ ಪಸಂದ್​' ಬಿಡುಗಡೆಯಾಗಲಿದೆ. ಅದಾಗಿ ಮರುವಾರಕ್ಕೆ ಅಂದರೆ, ನ. 18ರಂದು ಪ್ರಜ್ವಲ್​ ಅಭಿನಯದ 'ಅಬ್ಬರ' ತೆರೆಗೆ ಬರಲಿದೆ. ನ. 25ಕ್ಕೆ ಗಣೇಶ್​ ಅಭಿನಯದ 'ತ್ರಿಬ್ಬಲ್​ ರೈಡಿಂಗ್​' ಬಿಡುಗಡೆಯಾಗಲಿದೆ. ಇನ್ನು, ಅದಾಗಿ ಒಂದು ತಿಂಗಳಿಗೆ ಸರಿಯಾಗಿ ಕ್ರಿಸ್ಮಸ್​ ಸಂದರ್ಭದಲ್ಲಿ ಶಿವರಾಜಕುಮಾರ್​ ಅಭಿನಯದ 'ವೇದ' ಚಿತ್ರವು ಬಿಡುಗಡೆಯಾಗಲಿದೆ. ಮಿಕ್ಕಂತೆ ಸದ್ಯಕ್ಕೆ ಸ್ಟಾರ್​ ಚಿತ್ರಗಳ ಪೈಪೋಟಿ ಇಲ್ಲ.

ಉಪೇಂದ್ರ ಅಭಿನಯದ 'ಕಬ್ಜ' ಮತ್ತು 'ಬುದ್ಧಿವಂತ 2' ಚಿತ್ರಗಳ ಚಿತ್ರೀಕರಣ ಮುಗಿದಿದ್ದರೂ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಅದೇ ರೀತಿ ಧನಂಜಯ್​ ಅಭಿನಯದ 'ಒನ್ಸ್​ ಅಪಾನ್​ ಎ ಟೈಮ್​ ಇನ್​​ ಜಮಾಲಿಗುಡ್ಡ'ದ ಬಿಡುಗಡೆ ಸಹ ಘೋಷಣೆಯಾಗಿಲ್ಲ. ಪ್ರಜ್ವಲ್​ ಅಭಿನಯದ 'ವೀರಂ', ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ಹೀಗೆ ಒಂದಿಷ್ಟು ಚಿತ್ರಗಳೇನೋ ಬಿಡುಗಡೆಯಾಗುವುದಕ್ಕೆ ಸಿದ್ಧವಿದ್ದರೂ, ಇನ್ನೂ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ.

ಈ ವರ್ಷ ಬಿಡುಗಡೆಯಾಗಬೇಕಿದ್ದ ಒಂದಿಷ್ಟು ನಿರೀಕ್ಷಿತ ಚಿತ್ರಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿವೆ. ರಕ್ಷಿತ್​ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಇನ್ನೂ ಮುಗಿದಿಲ್ಲ. ಶ್ರೀಮುರಳಿ ಅಭಿನಯದ 'ಬಘೀರ', ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್​', ಉಪೇಂದ್ರ ಅಭಿನಯದ 'ಯು/ಐ', 'ದುನಿಯಾ' ವಿಜಯ್​ ಅಭಿನಯದ 'ಭೀಮ' ಚಿತ್ರಗಳ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಹಾಗಾಗಿ, ಅವೆಲ್ಲವೂ ಮುಂದಿನ ವರ್ಷವೇ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net