ಕೆಜಿಎಫ್​ಗಿಲ್ಲ ಎದುರಾಳಿ!; ಜೆರ್ಸಿ ಬಂದರೂ ಅದರ ಪ್ರಭಾವ ಕಡಿಮೆಯೇ...

KGF
Published on

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದ ಜತೆಗೆ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಸಹ ಏಪ್ರಿಲ್ 14ಕ್ಕೆ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಗೊತ್ತೇ ಇದೆ. ಈಗ ಇದರಲ್ಲೊಂದು ದೊಡ್ಡ ಬದಲಾವಣೆಯಾಗಿದ್ದು, ‘ಲಾಲ್ ಸಿಂಗ್ ಛಡ್ಡಾ’ ಆರು ತಿಂಗಳ ಕಾಲ ಮುಂದಕ್ಕೆ ಹೋಗಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ಲಾಲ್ ಸಿಂಗ್ ಛಡ್ಡಾ’ ಚಿತ್ರವು ಪ್ರೇಮಿಗಳ ದಿನದಂದು ಬಿಡುಗಡೆಯಾಗಬೇಕಿತ್ತು. ಆದರೆ, ಕೆಲಸಗಳು ಮುಗಿದಿಲ್ಲ ಎಂಬ ಕಾರಣಕ್ಕೆ ಏ.14ಕ್ಕೆ ಮುಂದೂಡಲ್ಪಟ್ಟಿತ್ತು. ಇದಾಗಿ ಎರಡು ತಿಂಗಳಾಗಿವೆ. ಇನ್ನೂ ಕೆಲಸಗಳು ಮುಗಿಯದ ಕಾರಣ ಚಿತ್ರವನ್ನು ಆ.12ಕ್ಕೆ ಮುಂದೂಡಲಾಗಿದೆ. ಹಾಗಂತ ಚಿತ್ರತಂಡವೇ ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಘೋಷಿಸಿದೆ. ‘ಕೆಜಿಎಫ್ 2’ ಚಿತ್ರಕ್ಕೆ ಉತ್ತರ ಭಾರತದಲ್ಲಿ ‘ಲಾಲ್ ಸಿಂಗ್ ಛಡ್ಡಾ’ ದೊಡ್ಡ ಸ್ಪರ್ಧಿಯಾಗಿತ್ತು. ಚಿತ್ರ ಮುಂದಕ್ಕೆ ಹೋಗುತ್ತಿದ್ದಂತೆ, ಸ್ಪರ್ಧೆ ಕಡಿಮೆಯಾಗಿದೆ.

ಹಾಗಂತ ಸ್ಪರ್ಧೆಯೇ ಇಲ್ಲ ಎಂದು ಹೇಳುವಂತಿಲ್ಲ. ಯಾವಾಗ ‘ಲಾಲ್ ಸಿಂಗ್ ಛಡ್ಡಾ’ ಮುಂದೂಡಿಕೆ ಆಯಿತೋ, ತಕ್ಷಣವೇ ಅದೇ ದಿನದಂದು ಬರುವುದಾಗಿ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಚಿತ್ರತಂಡ ಘೋಷಿಸಿದೆ. ಇದು ಸಹ ದೊಡ್ಡ ಬಜೆಟ್​ನ ಚಿತ್ರವಾದರೂ, ಪ್ರಭಾವ ಕಡಿಮೆಯೇ. ಇನ್ನು, ವಿಜಯ್ ಅಭಿನಯದ ತಮಿಳಿನ ‘ಬೀಸ್ಟ್’ ಸಹ ಅದೇ ದಿನ ಬಿಡುಗಡೆಯಾಗುವ ಸುದ್ದಿ ಇದೆ. ಆದರೆ, ಚಿತ್ರತಂಡವು ಚಿತ್ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದೆಯೇ ಹೊರತು, ಇದುವರೆಗೂ ಅಧಿಕೃತ ದಿನಾಂಕ ಘೋಷಿಸಿಲ್ಲ.

ಇನ್ನೂ ಮುಗಿದಿಲ್ಲ ಕೆಜಿಎಫ್ ಶೂಟಿಂಗ್?: ಇತ್ತೀಚೆಗಷ್ಟೇ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿ ತಂಡದ ಹಲವರು ಡಬ್ಬಿಂಗ್ ಮುಗಿಸಿದ್ದರು. ಇನ್ನೇನು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದು, ಚಿತ್ರತಂಡವು ಪ್ರಚಾರಕ್ಕೆ ಅಣಿಯಾಗುತ್ತಿದೆ ಎನ್ನುತ್ತಿರುವಾಗಲೇ, ಹಾಡೊಂದರ ಶೂಟಿಂಗ್ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಮಾತ್ರ ಎಲ್ಲಿಯೂ ಹೇಳಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net