ನಿವಿಷ್ಕಾಗೆ ಡಬಲ್​ ಧಮಾಕಾ: ಹಬ್ಬದ ಸಂಭ್ರಮದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಬೆಳಗಾವಿ ಮೂಲದ ನಟಿ

nivishka1
Published on

ಬೆಂಗಳೂರು: ‘ಸೋಮು ಸೌಂಡ್ ಇಂಜಿನಿಯರ್’ ನಟಿ ನಿವಿಷ್ಕಾ ಪಾಟೀಲ್‌ಗೆ ಒಂದೆಡೆ ನವರಾತ್ರಿಯ ಸಂಭ್ರಮವಾದರೆ, ಮತ್ತೊಂದಡೆ ಹುಟ್ಟುಹಬ್ಬದ ಖುಷಿ. ಕಳೆದ ಶುಕ್ರವಾರದಂದು (ಸೆ.26) ದಸರಾ ಸಡಗರದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನಿವಿಷ್ಕಾ. ಬೆಳಗಾವಿ ಮೂಲದ ನಟಿಯ ಮನೆಯಲ್ಲಿ ಅದ್ದೂರಿಯಾಗಿಯೇ ದಸರಾ ಆಚರಿಸುತ್ತಾರಂತೆ. ದೇವಿಯನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಕಠಿಣ ವ್ರತ, ಪೂಜೆ ಕೈಗೊಳ್ಳುತ್ತಾರಂತೆ. ಈ ಬಾರಿಯ ದಸರಾ ಪೂಜೆ ಹಾಗೂ ವಿಶೇಷತೆ ಬಗ್ಗೆ, ‘ನಾನ್ನೂರು ಬೆಳಗಾವಿ. ಮೊದಲಿನಿಂದಲೂ ನಮ್ಮ ಮನೆಯಲ್ಲಿ ಅದ್ದೂರಿ ದಸರಾ ಆಚರಿಸುತ್ತೇವೆ. ದೇವಿಯನ್ನು ಪ್ರತಿಷ್ಠಾಪಿಸಿ ಪ್ರತಿ ದಿನ ಒಂದೊಂದು ಅವತಾರದಲ್ಲಿ ಸಿಂಗರಿಸಿ ದೇವಿಯನ್ನು ಆರಾಧಿಸುತ್ತೇವೆ. ನಾನು ಕೂಡ ಪೂಜೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಮ್ಮ ಕಠಿಣ ವ್ರತ ಕೈಗೊಳ್ಳುತ್ತಾರೆ. ಉಪವಾಸ ಮಾಡುತ್ತಾರೆ. ಹಿಂದಿನ ವರ್ಷ ನಾನು ಕೂಡ ಒಂಬತ್ತು ದಿನಗಳ ಕಾಲ ಕಠಿಣ ವ್ರತ ಮಾಡಿದ್ದೆ. ಈ ಬಾರಿ ಮಾಡಲು ಆಗಲಿಲ್ಲ. ಇನ್ನು ದಸರಾ ಹಬ್ಬದ ಸಮಯದಲ್ಲಿಯೇ ನನ್ನ ಹುಟ್ಟುಹಬ್ಬ ಆಚರಿಸುವ ಕಾರಣ ಪ್ರತಿಬಾರಿ ಹಬ್ಬ ಬಂದಾಗಲೂ ನನಗೆ ಡಬಲ್ ಸಂಭ್ರಮ. ಇನ್ನು ದಸರಾ ಎಂದರೆ ನನಗೆ ನೆನಪಾಗುವುದೇ ಮೈಸೂರು ಅಂಬಾರಿ ಮೆರವಣಿಗೆ. ನಾವು ಬೆಂಗಳೂರಿಗೆ ಬಂದು ಐದು ವರ್ಷ ಕಳೆದಿವೆ. ಕಳೆದ ಐದು ವರ್ಷದಿಂದ ಕುಟುಂಬದ ಜತೆ ಮೈಸೂರಿಗೆ ಹೋಗಿ ದಸರಾ ವೀಕ್ಷಿಸುತ್ತಿದ್ದೇನೆ. ಅದೊಂದು ಅಭೂತಪೂರ್ವ ಅನುಭವ. ದೇವಿ ಚಾಮುಂಡೇಶ್ವರಿ ಮಹಿಮೆಯನ್ನು ಇಡೀ ಜಗತ್ತಿಗೆ ಸಾರುವ ಹಬ್ಬ ಎಂದೇ ಭಾವಿಸುವೆ’ ಎಂದು ನಿವಿಷ್ಕಾ ಪಾಟೀಲ್ ಖುಷಿ ಹಂಚಿಕೊಂಡರು.

ಹಬ್ಬದ ಉಡುಗೊರೆ: ಈ ಬಾರಿ ದಸರಾ ಹಬ್ಬ ನಟಿ ನಿವಿಷ್ಕಾಗೆ ಬಂಪರ್ ಉಡುಗೊರೆ ನೀಡಿದೆ. ಹುಟ್ಟುಹಬ್ಬದ ಜತೆಗೆ ಹಬ್ಬದ ಸಮಯದಲ್ಲಿಯೇ ಅವರು ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ‘ದಸರಾ ಹಬ್ಬ ತುಂಬಾ ಖುಷಿ ನೀಡಿದೆ. ಇದೇ ಬುಧವಾರ ನಾನು ಹೊಸ ಚಿತ್ರಕ್ಕೆ ಸಹಿ ಮಾಡಿದ್ದೇನೆ. ಸದ್ಯ ಮೂರು ಸಿನಿಮಾಗಳು ಕೈಯಲ್ಲಿದ್ದು, ‘ಜಾಂಟಿ ಸನ್ ಆಫ್​ ಜಯರಾಜ್’ ಸೇರಿ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ’ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net