ರವಿಮಾಮನ ಫ್ಯಾನ್ ಸೂಜಿ; ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ಹೊಸ ಗೆಟಪ್

IMG-20210519-WA0038
Published on

ಬೆಂಗಳೂರು: ‘ಗುರು ಶಿಷ್ಯರು’ ಚಿತ್ರದ ಶರಣ್ ಅವರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ನಾಯಕಿಯ ಫಸ್ಟ್​ಲುಕ್​ನ ಸರದಿ. ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಿಶ್ವಿಕಾ ನಾಯ್ಡುಗೆ ಚಿತ್ರತಂಡವು ಫಸ್ಟ್​ಲುಕ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ. ಸೈಕಲ್ ಏರಿ ಹಾಲು ಮಾರೋಕೆ ಹೊರಟ ಭಂಗಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಚಿತ್ರದ ನಾಯಕಿಯ ಪಾತ್ರ ಮತ್ತು ಸಿನಿಮಾದ ಅಪ್​ಡೇಟ್ ಕುರಿತು ಮಾಹಿತಿ ನೀಡುವ ನಿರ್ದೇಶಕ ಜಡೇಶ್, ‘ಅಪ್ಪಟ ಹಳ್ಳಿಗಾಡಿನ ಹುಡುಗಿಯಾಗಿ, ಯಾವುದಕ್ಕೂ ಅಂಜದ ಸುಜಾತಾ ಪಾತ್ರವನ್ನು ನಿಶ್ವಿಕಾ ಮಾಡಿದ್ದಾರೆ. ಹೈನುಗಾರಿಕೆ ಮಾಡುತ್ತ ಇತರರಿಗೂ ಆಕೆ ಮಾದರಿಯಾಗಿರುತ್ತಾಳೆ. ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯೂ ಹೌದು’ ಎಂದು ನಾಯಕಿ ಪಾತ್ರ ವಿವರಿಸುವ ಜಡೇಶ್, ‘ಈಗಾಗಲೇ ಚಿತ್ರದ ಶೇ. 60 ಭಾಗದ ಶೂಟಿಂಗ್ ಮುಗಿದಿದೆ. 1995ರ ಕಾಲಘಟ್ಟದಲ್ಲಿ ಸಿನಿಮಾ ಶುರುವಾಗಿ ಅಲ್ಲಿಯೇ ಮುಗಿಯುವುದರಿಂದ, ಸಾಕಷ್ಟು ಸವಾಲುಗಳೂ ಎದುರಾಗಿದ್ದವು. ಶಿವಮೊಗ್ಗ, ಮಂಡ್ಯದಲ್ಲಿ ಚಿತ್ರೀಕರಣ ನಡೆದಿದೆ. ಕೆಲವೆಡೆ ಸೆಟ್ ಸಹ ಹಾಕಿ ಶೂಟ್ ಮಾಡಿದ್ದೇವೆ. ಲಾಕ್​ಡೌನ್ ಸಡಿಲವಾಗುತ್ತಿದ್ದಂತೆ, ಬಾಕಿ ಕೆಲಸ ಶುರುವಾಗಲಿದೆ’ ಎನ್ನುತ್ತಾರವರು.

‘ಗುರು ಶಿಷ್ಯರು’ ಚಿತ್ರದಲ್ಲಿ ಪಿಟಿ ಶಿಕ್ಷಕನಾಗಿ ಶರಣ್ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ. ಶರಣ್ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ಮಾಪಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net