

ಬೆಂಗಳೂರು: ಲಾಕ್ಡೌನ್ ಘೋಷಣೆಯಾದ ನಂತರ, ಚಿತ್ರಮಂದಿರಗಳ ಸ್ಥಿತಿ-ಗತಿ ಮತ್ತು ಅದರ ಅಗತ್ಯತೆಯ ಬಗ್ಗೆ ಸತೀಶ್ ನೀನಾಸಂ ಒಂದು ಕಿರುಚಿತ್ರ ಮಾಡಿದ್ದರು. ಆ ನಂತರ ಮುಂದೇನು ಎಂದು ಯೋಚಿಸುತ್ತಿದ್ದವರಿಗೆ, ನೀವ್ಯಾಕೆ ಒಂದೊಂದು ಕಥೆ ಹೇಳಬಾರದು ಎಂದು ಯಾರೋ ಕೇಳಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸತೀಶ್, ಪ್ರತೀ ವಾರ ಒಂದು ಕಥೆ ಹೇಳುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ಸತೀಶ್ ಆಡಿಯೋ ಹೌಸ್ ಎಂಬ ಚಾನಲ್ ಇದೆ. ಈ ಚಾನಲ್ನಲ್ಲಿ ‘ಒಂದ್ ಕಥೆ ಹೇಳ್ತೀನಿ, ಕೇಳ್ತೀರಾ’ ಎಂಬ ಹೊಸ ಕಾರ್ಯಕ್ರಮವನ್ನು ಅವರು ಶುರು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರತೀ ವಾರ ಒಂದೊಂದು ಸ್ಪೂರ್ತಿದಾಯಕ ಕಥೆಗಳನ್ನು ಸತೀಶ್ ಹೇಳುತ್ತಾರೆ. ಈಗಾಗಲೇ ಅವರು ‘ಸಿಹಿ ತಿಂಡಿ’ ಮತ್ತು ‘ಐದು ರೂಪಾಯಿ ಡಾಕ್ಟರ್’ ಎಂಬ ಎರಡು ಕಥೆಗಳನ್ನು ಹೇಳಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ಇದನ್ನು ಇನ್ನಷ್ಟು ಕಾಲ ಮುಂದುವರೆಸುವ ಯೋಚನೆ ಅವರದ್ದು.
ಈ ಕುರಿತು ಮಾತನಾಡಿರುವ ಅವರು, ‘ಲಾಕ್ಡೌನ್ ಸಮಯದಲ್ಲಿ ಸಮಾಜಕ್ಕೆ ಏನಾದರೂ ಉಪಯೋಗವಾಗುವಂತಹ ಕೆಲಸ ಮಾಡಬೇಕು ಎಂದನಿಸಿತು. ಈ ಸಂದರ್ಭದಲ್ಲಿ, ಜನರಿಗೆ ಒಂದಿಷ್ಟು ಸ್ಪೂರ್ತಿದಾಯಕ ಕಥೆಗಳನ್ನು ಹೇಳುವಂತಹ ಯೋಚನೆ ಬಂತು. ಈ ನಿಟ್ಟಿನಲ್ಲಿ ಪ್ರತೀ ವಾರ ಒಂದು ಕಥೆ ಹೇಳುವ ಮೂಲಕ ಸ್ಪೂರ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸತೀಶ್ ನೀನಾಸಂ.