

ಬೆಂಗಳೂರು: ಕನ್ನಡ ಕಿರುತೆರೆ ವೀಕ್ಷಕರ ಮನ ಮಿಡಿತವನ್ನು ಅರ್ಥೈಸಿಕೊಂಡು ಮನರಂಜನೆಯಲ್ಲಿ ಹೊಸ ಮುನ್ನುಡಿ ಬರೆದಿರುವ ಸ್ಟಾರ್ ಸುವರ್ಣ ವಾಹಿನಿಯು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿ ನೀಡಿದೆ. ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿರುವ ‘ನೀನಾದೆ ನಾ’ ಧಾರಾವಾಹಿ ಇದೀಗ ಅದೇ ಜೋಡಿಯೊಂದಿಗೆ ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲು ಸಜ್ಜಾಗಿದೆ.
ಈ ಹೊಸ ಕಥೆಯು ದೈವರಾಧನೆಯ ತವರೂರು ತುಳುನಾಡಿನಲ್ಲಿ ಆರಂಭವಾಗುತ್ತದೆ. ನಾಯಕ ವಿಕ್ರಂ, ಕುಡ್ಲದ ಡಾನ್ ಕರುಣಾಕರ್ ಶೆಟ್ಟಿಯ ಬಲಗೈ ಬಂಟನಾಗಿರುತ್ತಾನೆ. ನಾಯಕಿ ವೇದಾ, ಸಂಪ್ರದಾಯಸ್ಥರ ಮನೆತನದ ಹುಡುಗಿ. ಉಡುಪಿ ಕೃಷ್ಣೆಯ ಭಕ್ತೆ. ಜತೆಗೆ ಸಣ್ಣ ಉದ್ಯಮ ಆರಂಭಿಸಿರುತ್ತಾಳೆ. ಒಂದ್ಕಡೆ ರೌಡಿಯಾಗಿದ್ದರು ಒಳ್ಳೆಯದನ್ನು ಮಾಡುವ ವಿಕ್ರಂ, ಇನ್ನೊಂದೆಡೆ ನೇರ ನಡೆಯ ವೇದಾ. ಈ ಇಬ್ಬರೂ ಹೇಗೆ ಒಂದಾಗ್ತಾರೆ? ಈ ಇಬ್ಬರ ವಿರುದ್ಧ ಮನಸುಗಳ ಸೆಣಸಾಟವೇ ಈ ಧಾರಾವಾಹಿ ಮುಖ್ಯ ಕಥಾ ಹಂದರ.
ಹಳೆ ಹೆಸರಿನಲ್ಲಿ ಹೊಸ ಕಥೆಯೊಂದಿಗೆ ಶುರುವಾಗುತ್ತಿರುವ ಈ ಧಾರಾವಾಹಿಯಲ್ಲಿ ದಿಲೀಪ್ ಶೆಟ್ಟಿ ನಾಯಕರಾಗಿದ್ದಾರೆ. ನಾಯಕಿಯಾಗಿ ಖುಷಿ ಶಿವು ಅಭಿನಯಿಸುತ್ತಿದ್ದಾರೆ. ನೀವು ಮೆಚ್ಚಿರುವ ವಿಕ್ರಂ-ವೇದಾ ಜೋಡಿ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಪ್ರಸ್ತುತ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿ ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ‘ಪಿಂಗಾರ ಪ್ರೊಡಕ್ಷನ್’ ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ‘ನೀನಾದೆ ನಾ’ ಪ್ರೀತಿಯ ಹೊಸ ಅಧ್ಯಾಯವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.