

ಬೆಂಗಳೂರು: ದರ್ಶನ್ ನಟನೆಯ ‘ಕ್ರಾಂತಿ’ ಚಿತ್ರದ ‘ಶೇಕ್ ಇಟ್ ಪುಷ್ಪವತಿ’ ಸಾಂಗ್ ಮೂಲಕ ಗಮನಸೆಳೆದವರು ನಟಿ ನಿಮಿಕಾ ರತ್ನಾಕರ್. ಇದಕ್ಕೂ ಮುನ್ನ ‘ಅಬ್ಬರ’, ‘ಮಿ.ಬ್ಯಾಚುಲರ್’ ಸಿನಿಮಾಗಳಲ್ಲಿ ನಟಿಸಿದ್ದರೂ, ನಿಮಿಕಾಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿದ್ದು ‘ಕ್ರಾಂತಿ’ ಚಿತ್ರದ ಸ್ಪೆಷಲ್ ಸಾಂಗ್. ಆ ಬಳಿಕ ಅವರು ಸ್ಯಾಂಡಲ್ವುಡ್ನಲ್ಲಿ ಬಿಜಿಯಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಶೂಟಿಂಗ್ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಹೆಸರು ‘ವೈಲ್ಡ್ ಟೈಗರ್ ಸಫಾರಿ’. ಮಂಗಳೂರಿನಲ್ಲಿ ಇಂದು ಈ ಚಿತ್ರದ ಮುಹೂರ್ತ ನೆರವೇರಲಿದೆ. ‘ಕೆಜಿಎಫ್’ ಸರಣಿಯ ಸಂಭಾಷಣಕಾರ ಗುರುತಿಸಿಕೊಂಡಿದ್ದ ಚಂದ್ರಮೌಳಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬಾಲಿವುಡ್ನಲ್ಲಿ ಹೆಸರುವಾಸಿಯಾಗಿರುವ ಡಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಮುಖ್ಯಪಾತ್ರದಲ್ಲಿದ್ದು, ನಿಮಿಕಾ ನಾಯಕಿಯಾಗಿ ಸಾಥ್ ನೀಡಲಿದ್ದಾರೆ. ಶೀತಲ್ ಪೂಜಾರಿ ಇನ್ನೊಂದು ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಶಿವಕುಮಾರ್ ಕಲಾ ನಿರ್ದೇಶನ, ಎ.ಜೆ.ಶೆಟ್ಟಿ ಛಾಯಾಗ್ರಹಣ ಇರಲಿದೆ.
ಉಪ್ಪಿಗೆ ಜೋಡಿ: ನಿಮಿಕಾ ರತ್ನಾಕರ್ ಕನ್ನಡದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸದ್ಯ ಅವರ ಕೈಯಲ್ಲಿ ನಾಲ್ಕು ಪ್ರಾಜೆಕ್ಟ್ಗಳಿವೆ. ಓಂ ಪ್ರಕಾಶ್ ರಾವ್ ನಿರ್ದೇಶನದ ‘ತ್ರಿಶೂಲಂ’ ಚಿತ್ರದಲ್ಲಿ ನಿಮಿಕಾ ನಟ ಉಪೇಂದ್ರಗೆ ಜೋಡಿಯಾಗಿದ್ದು, ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಜತೆಗೆ ‘ಫೀನಿಕ್ಸ್’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ‘ಫ್ಲಟ್ ನಲ್ಲೂ ನಿಮಿಕಾ ಮುಖ್ಯ ಭೂಮಿಕೆಯಲ್ಲಿದ್ದಾರೆ.