ಕರೊನಾ ಲಾಕ್​ಡೌನ್​ ಹಿನ್ನೆಲೆ; ಆನ್​ಲೈನ್​ನಲ್ಲೇ ಗಿಟಾರ್ ಕಲಿಯುತ್ತಿದ್ದಾರೆ ನಿಮಿಕಾ

page 10 1
Published on

ಬೆಂಗಳೂರು: ಕರೊನಾ ಲಾಕ್​ಡೌನ್ ಸಮಯವನ್ನು ಸದ್ವಿನಿಯೋಗಪಡಿಸಿಕೊಳ್ಳುವಲ್ಲಿ ಸಿನಿಮಾ ತಾರೆಯರು ಮುಂದಿದ್ದಾರೆ. ಹರಿಪ್ರಿಯಾ ಬ್ಲಾಗ್ ಬರವಣಿಗೆಯಲ್ಲಿ ತೊಡಗಿಸಿಕೊಂಡರೆ, ಪ್ರಣೀತಾ ತಮ್ಮ ಪ್ರಣೀತಾ ಫೌಂಡೇಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಿತಿ ಪ್ರಭುದೇವ ಬೀದಿ ನಾಯಿಗಳ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇದೀಗ ನೀಳ ಕಾಯದ ಚೆಲುವೆ ನಿಮಿಕಾ ರತ್ನಾಕರ್ ಗಿಟಾರ್ ಕಲಿಕೆಯಲ್ಲಿ ಬಿಜಿಯಾಗಿದ್ದಾರೆ. ಅದೂ ಆನ್​ಲೈನ್​ನಲ್ಲಿ ಎಂಬುದು ವಿಶೇಷ!

ಹೌದು, ಲಾಕ್​ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನ ಮನೆಯಲ್ಲಿಯೇ ಕುಟುಂಬದೊಂದಿಗೆ ಬಿಡಾರ ಹೂಡಿರುವ ನಿಮಿಕಾ, ಕ್ವಾರಂಟೈನ್ ದಿನಗಳನ್ನು ಆಸ್ವಾದಿಸುತ್ತಿದ್ದಾರೆ. ನಿತ್ಯ ಯೋಗ, ಮೀನೂಟ ಸೇರಿ ಒಂದಷ್ಟು ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಹಾಭಾರತ ಓದುವುದಕ್ಕೆ ಇದೇ ಸರಿಯಾದ ಸಮಯ ಅನಿಸಿತು. ಹಾಗಾಗಿ ಅದನ್ನು ಓದುತ್ತಿದ್ದೇನೆ. ಅದಲ್ಲದೆ ಗಿಟಾರ್ ಕಲಿಯುತ್ತಿದ್ದೇನೆ. ಈಗಾಗಲೇ ಸಂಗೀತದ ನಂಟಿರುವುದರಿಂದ ಅದಕ್ಕೆ ಗಿಟಾರ್ ಟಚ್ ಮತ್ತಷ್ಟು ಮುದವಾಗಿಸಲಿದೆ. ಹಾಗಾಗಿ ಆನ್​ಲೈನ್​ನಲ್ಲಿ 20 ದಿನಗಳಲ್ಲಿ ಗಿಟಾರ್ ಕಲಿಯುತ್ತಿದ್ದೇನೆ’ ಎನ್ನುತ್ತಾರೆ ನಿಮಿಕಾ.

ಇನ್ನುಳಿದಂತೆ ಊಟದ ವಿಚಾರದಲ್ಲೂ ಭರ್ಜರಿ ಬ್ಯಾಟಿಂಗ್​ನಲ್ಲಿ ನಿಮಿಕಾ ಬಿಜಿಯಾಗಿದ್ದಾರೆ. ‘ಬೆಂಗಳೂರಿನಲ್ಲಿ ನಾನೊಬ್ಬಳೇ ಇದ್ದೆ. ನಾನೇ ಅಡುಗೆ ಮಾಡಿಕೊಂಡು ಊಟ ಮಾಡಬೇಕಿತ್ತು. ಇದೀಗ ಅಮ್ಮ ಎಲ್ಲವನ್ನೂ ಮಾಡ್ತಾರೆ. ನನ್ನದೇನಿದ್ದರೂ ಊಟ ಮಾಡುವುದಷ್ಟೇ ಕೆಲಸ. ಇದರ ಜತೆಗೆ ನಿತ್ಯ ಸಂಜೆ ಸ್ನೇಹಿತರೊಂದಿಗೆ ವಿಡಿಯೋ ಚಾಟ್ ಮೂಲಕ ಒಂದಷ್ಟು ಕಾಲ ಕಳೆಯುತ್ತೇನೆ. ಸಿನಿಮಾ ನಮ್ಮ ವೃತ್ತಿ ಆಗಿರುವುದರಿಂದ ಹೆಚ್ಚೆಚ್ಚು ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದೇನೆ. ನೆಟ್​ಫ್ಲಿಕ್ಸ್, ಅಮೆಜಾನ್ ಸೇರಿ ಎಲ್ಲ ಪ್ಲಾಟ್​ಫಾಮರ್್​ಗಳಲ್ಲಿನ ಸಿನಿಮಾಗಳನ್ನು ನೋಡುತ್ತಿದ್ದೇನೆ ಎಂಬುದು ನಿಮಿಕಾ ಮಾತು.

ಇತ್ತ ಲಾಕ್​ಡೌನ್ ವಿಸ್ತರಣೆ ಬಗ್ಗೆಯೂ ಮಾತನಾಡುವ ನಿಮಿಕಾ, ‘ಲಾಕ್​ಡೌನ್ ನಮ್ಮ ಸಲುವಾಗಿ ನಾವೇ ಮಾಡಿಕೊಳ್ಳಬೇಕು. ದಿನೇದಿನೆ ಸೋಂಕು ಹೆಚ್ಚಾಗುತ್ತಿರುವುದರಿಂದ ಮನೆಯಲ್ಲಿದುಕೊಂಡೇ ಕರೊನಾವನ್ನು ಮಟ್ಟಹಾಕಬೇಕು. ಸರ್ಕಾರ ಮತ್ತು ಕರೊನಾ ವಾರಿಯರ್ಸ್ ಕೆಲಸಕ್ಕೆ ಗೌರವ ಸಲ್ಲಿಸಬೇಕು’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net