

ಬೆಂಗಳೂರು: ನಂಬಿಕೆ ಮೇಲೆ ಹುಟ್ಟಿಕೊಂಡಿರುವ ಸಂಬಂಧಗಳನ್ನು ನಾವು ಕೂಡ ಅಷ್ಟೇ ವಿಶ್ವಾಸದಿಂದ ನಡೆಸಿಕೊಳ್ಳಬೇಕು. ಅಕಸ್ಮಾತ್ ಆ ಬಾಂಧವ್ಯಕ್ಕೆ ಚ್ಯುತಿ ತಂದರೆ ಅದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ನೀಡುತ್ತದೆ ಈ ವಾರ ತೆರೆಕಂಡ ‘ನಿಮಗೊಂದು ಸಿಹಿಸುದ್ದಿ’ ಸಿನಿಮಾ.
ಭಾರತದ ಖ್ಯಾತ ಶೆಫ್ ಅರ್ಜುನ್ ಹೆಬ್ಬಾರ್ (ರಘು ಭಟ್). ಒಂದು ರಾತ್ರಿ ತೀವ್ರವಾದ ಹೊಟ್ಟೆ ನೋವು ಅನುಭವಿಸುತ್ತಾನೆ. ಯಾರಿಗೂ ಹೇಳಲಾಗದಷ್ಟು ಸಂಕಟ. ಸ್ನೇಹಿತರಿಗೆ ಕರೆ ಮಾಡಿದರೂ, ಆತನ ನೆರವಿಗೆ ಯಾರೂ ಬರುವುದಿಲ್ಲ. ಕೊನೆಗೆ ತಾನೇ ಆಸ್ಪತ್ರೆಗೆ ಕರೆ ಮಾಡಿ, ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಸೇರುತ್ತಾನೆ. ಬೆಳಗ್ಗೆ ಎದ್ದು ನೋಡಿದರೆ, ಆತನ ಪಕ್ಕದಲ್ಲಿ ಮಗು. ಅಯ್ಯೋ ಗಂಡು, ಮಗುವಿಗೆ ಜನ್ಮ ನೀಡುವುದಾ ಎಂದು ಆಶ್ಚರ್ಯವಾಗಬಹುದು. ಆದರೆ, ಆ ಮಗುವಿನ ಕಥೆ ಏನು ಎಂದು ತಿಳಿಯಬೇಕಾದರೆ ನೀವು ಸಿನಿಮಾ ನೋಡಬೇಕು.
ಮೊದಲ ಬಾರಿಗೆ ನಿರ್ದೇಶನದ ಜತೆಗೆ ನಟಿಸಿರುವ ರಘು ಭಟ್ ಒಂದು ವಿಶೇಷ, ವಿಭಿನ್ನ ಕಥೆಯನ್ನು ಹೇಳಿದ್ದಾರೆ. ಆದರೆ, ಇನ್ನಷ್ಟು ಪರಿಣಾಮಕಾರಿಯಾಗಿ ನಿರೂಪಣೆ ಮಾಡುವ ಅವಕಾಶವಿತ್ತು. ಪ್ರಾರಂಭದಿಂದಲೇ ಕಥೆಗೆ ಟರ್ನ್ ಆ್ಯಂಡ್ ಟ್ವಿಸ್ಟ್ ನೀಡಲು ಪ್ರಯತ್ನಿಸಿದ್ದಾರೆ. ಸಹಜ ಹಾಸ್ಯ ಹಾಗೂ ಒಂದೇ ಲೋಕೇಷನ್‌ನಲ್ಲಿ ಮೊದಲರ್ಧ ಸಾಗುತ್ತದೆ. ಇನ್ನು ಸೆಕೆಂಡ್ ಹಾಫ್ನಲ್ಲಿ ಕಥೆ ತೆರೆದುಕೊಂಡಾಗ, ಕ್ಲೈಮ್ಯಾಕ್ಸ್‌ನಲ್ಲಿ ಸಿಗುವ ತಿರುವು ಅಚ್ಚರಿ ಮೂಡಿಸುತ್ತದೆ. ಕಥೆಯಲ್ಲಿ ನವಿರಾದ ಹಾಸ್ಯ ಇರುವುದರಿಂದ ನಕ್ಕು ನಗಿಸುತ್ತದೆ. ರಘು ಭಟ್ ನಟನೆ ಚೆನ್ನಾಗಿ ಮೂಡಿಬಂದಿದೆ. ದ್ವಿತೀಯಾರ್ಧದಲ್ಲಿ ಬರುವ ಕಾವ್ಯಾ ಶೆಟ್ಟಿ ಪಾತ್ರಕ್ಕೆ ಇನ್ನಷ್ಟು ಅವಕಾಶ ಬೇಕಿತ್ತು ಎನಿಸುತ್ತದೆ. ಉಳಿದಂತೆ ಸುಜಯ್ ಶಾಸಿ, ದೀನ ದಯಾಳ ಅಲಿಯಾಸ್ ಡಿಡಿ, ಹರಿಣಿ ಶ್ರೀಕಾಂತ್ ಪಾತ್ರಗಳು ನಗೆಗಡಲಲ್ಲಿ ತೇಲಿಸುತ್ತವೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ವಿಜಯ್ ರಾಘವೇಂದ್ರ ಜೀವನದ ಪಾಠ ಮಾಡುತ್ತಾರೆ.