ನಶೆ ಏರಿಸುವ ಚಿತ್ರದಲ್ಲಿ ಧರ್ಮಗೆ ನಾಯಕಿಯಾಗಿ ನಿಖಿತಾ ಸ್ವಾಮಿ

Nikhitha
Published on

ಬೆಂಗಳೂರು: ‘ಕ್ಯಾಡ್ಬರೀಸ್’ ಎಂಬ ಚಿತ್ರವನ್ನು ಧರ್ಮ ಕೀರ್ತಿರಾಜ್ ಒಪ್ಪಿಕೊಂಡಿದ್ದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಈಗ ಅದರ ಜತೆಗೆ ‘ಟಕೀಲಾ’ ಎಂಬ ಚಿತ್ರದಲ್ಲೂ ಧರ್ಮ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ‘ಮೀಸೆ ಚಿಗುರಿದಾಗ’, ‘ಹೂ ಅಂತೀಯ ಉಹೂಂ ಅಂತೀಯ’ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರವೀಣ್ ನಾಯಕ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಸಹ ಅವರೇ ರಚಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, 10 ದಿನಗಳ ಚಿತ್ರೀಕರಣ ಸಹ ಮುಗಿದಿದೆ. ಇದೊಂದು ಪ್ರೇಮಕಥೆಯಾಗಿದ್ದು, ಧರ್ಮಗೆ ನಾಯಕಿಯಾಗಿ ನಿಖಿತಾ ಸ್ವಾಮಿ ಅಭಿನಯಿಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ‘ಸದ್ದು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಿಖಿತಾ, ಆ ನಂತರ ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜತೆಗೆ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಷ್ಮಿತಾ ಮುಂತಾದವರು ನಟಿಸುತ್ತಿರುವ ಈ ಚಿತ್ರವನ್ನು ‘ವಿದ್ಯಾರ್ಥಿ’, ‘ಮುನಿಯ’ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗಚಂದ್ರ ನಿರ್ವಿುಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಸಕಲೇಶಪುರ ಮುಂತಾದ ಕಡೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net