

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಮತ್ತು ರೇವತಿ ಅವರ ವಿವಾಹ ಇಂದು ರಾಮನಗರದಲ್ಲಿ ಮುಗಿದಿದೆ. ಆಯ್ದ ಬಂಧು-ಮಿತ್ರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ.
ಇದಕ್ಕೂ ಮುನ್ನ ಈ ಮದುವೆ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಬೆಂಗಳೂರನ್ನು ರೆಡ್ ಝೋನ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮದುವೆ ರಾಮನಗರದ ಕೇತುಗಾನಹಳ್ಳಿಯ ತೋಟದ ಮನೆಗೆ ಶಿಫ್ಟ್ ಆಗಿತ್ತು. ಗುರುವಾರದಿಂದಲೇ ರಾಮನಗರದ ತೋಟದ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು, ಇಂದು ಬೆಳಿಗ್ಗೆ 9.15ರಿಂದ 9.45ರವರೆಗಿನ ಶುಭ ಲಘ್ನದಲ್ಲಿ ಮದುವೆ ನಡೆದಿದೆ.
ಈ ಮದುವೆಯಲ್ಲಿ ಎರಡೂ ಕುಟುಂಬಗಳ ಕೆಲವೇ ಕೆಲವು ಸಂಬಂಧಿಕರು ಮತ್ತು ಆಪ್ತರು ಮಾತ್ರ ಹಾಜರಿದ್ದರು. ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮನವರು ಧಾರೆ ಕಾರ್ಯ ನಡೆಸಿಕೊಟ್ಟರು.
ಕುಮಾರಸ್ವಾಮಿ ಅವರಿಗೆ ರಾಮನಗರದಲ್ಲಿ ಎಲ್ಲರ ಸಮ್ಮುಖದಲ್ಲಿ ಮಗನ ಮದುವೆ ಮಾಡಬೇಕೆಂಬ ಆಸೆ ಇತ್ತು. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮದುವೆ ಸ್ಥಳಾಂತರಗೊಂಡಿತ್ತು. ಇನ್ನು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಮದುವೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾವಿರಲಿಲ್ಲ. ‘ಎಲ್ಲರೂ ಮದುವೆಗೆ ಬಂದರೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಹಾಗಾಗುತ್ತದೆ. ಹಾಗಾಗಿ ಎಲ್ಲರೂ ಮನೆಯಲ್ಲೇ ಇದ್ದು ನಿಖಿಲ್-ರೇವತಿಗೆ ಆಶೀರ್ವಾದ ಮಾಡಿ’ ಎಂದು ಕುಮಾರಸ್ವಾಮಿ ಇತ್ತೀಚೆಗೆ ಮನವಿ ಮಾಡಿದ್ದರು.
ಆದರೆ, ಮದುವೆಗೆ ಬಂದ ಅತಿಥಿಗಳ್ಯಾರೂ ಮಾಸ್ಕ್ ಧರಿಸಿರಲಿಲ್ಲ. ಹಾಗೆಯೇ, ಸೋಷಿಯಲ್ ಡಿಸ್ಟನ್ಸಿಂಗ್ ನಿಯಮ ಸಹ ಸರಿಯಾಗಿ ಪಾಲಿಸಲಿಲ್ಲ. ಇದು ಸರ್ಕಾರದ ಲಾಕ್‌ಡೌನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಮದುವೆಯ ದೃಶ್ಯಾವಳಿಗಳು ಸ್ಪಷ್ಟವಾಗಿ ಸೂಚಿಸುತ್ತವೆ.