

ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಿಂದ ಕೊಂಚ ವಿರಾಮ ಪಡೆದುಕೊಂಡು ಮದುವೆ ತಯಾರಿಯಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥದ ಬಳಿಕ ಭಾವಿ ಪತ್ನಿ ರೇವತಿಯೊಂದಿಗೆ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದರು.
ರಾಜರಾಜೇಶ್ವರಿ ನಗರದ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಜೋಡಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು. ಈ ಮೂಲಕ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಸಾಂಪ್ರದಾಯಿಕವಾಗಿಯೇ ಆಚರಿಸಿಕೊಂಡರು. ಬಳಿಕ ದೇವಸ್ಥಾನದಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ಕುಳಿತು ಬಾಳೆ ಎಲೆಯಲ್ಲಿ ಪ್ರಸಾದವನ್ನು ಸೇವಿಸಿದರು.
ಇದೇ ವೇಳೆ ನೂತನ ಜೋಡಿಯೊಂದಿಗೆ ಕುಟುಂಬದ ಸದಸ್ಯರು ಕೂಡ ಜತೆಯಾಗಿದ್ದರು. ವಿಶೇಷ ಭೇಟಿಯ ಫೋಟೋಗಳನ್ನು ನಿಖಿಲ್ ತಮ್ಮ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ಆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾನು ಹಾಗು ರೇವತಿಯವರು ಅಮ್ಮನ ಆಶೀರ್ವಾದ ಪಡೆದ ಸುಂದರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.
ಫೆ. 10ರಂದು ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ನೇರಿವೇರಿಸಿಕೊಂಡು ಜೋಡಿ ಏಪ್ರಿಲ್ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಎರಡು ಕುಟುಂಬಗಳಿಂದ ತಯಾರಿ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)