ನಿಖಿಲ್ ಈಗ ರೈಡರ್

Nikhil
Published on

ಬೆಂಗಳೂರು: ಲಾಕ್​ಡೌನ್​ನಿಂದ ಬ್ರೇಕ್ ಬಿದ್ದಿದ್ದ ನಿಖಿಲ್ ಕುಮಾರ್ ಅಭಿನಯದ ನಾಲ್ಕನೇ ಚಿತ್ರಕ್ಕೆ, ಈಗ ಮತ್ತೆ ಚಾಲನೆ ಸಿಕ್ಕಿದೆ. ಚಿತ್ರದ ಚಿತ್ರೀಕರಣ ಅಕ್ಟೋಬರ್ ಕೊನೆಗೆ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

ಚಿತ್ರದ ಹೆಸರು ‘ರೈಡರ್’. ಈ ‘ರೈಡರ್’ ಎಲ್ಲಿಗೆ ರೈಡ್ ಹೋಗ್ತಾನೆ, ಏನು ರೈಡ್ ಮಾಡ್ತಾನೆ ಎಂಬ ರಹಸ್ಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿಲ್ಲ. ಆದರೆ, ಬಿಡುಗಡೆಯಾಗಿರುವ ಪೋಸ್ಟರ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಸರಿಯಾಗಿ ರಗಡ್ ಆಗಿ ಈ ಫೋಸ್ಟರ್ ರೂಪಿಸಲಾಗಿದೆ. ಇದಕ್ಕೂ ಮುನ್ನ ‘ಎನ್​ಕೆ 04’ ಎಂಬ ಹೆಸರಿನಲ್ಲಿ ಪ್ರಾರಂಭವಾಗಿದ್ದ ಈ ಚಿತ್ರದ ಅರ್ಧದಷ್ಟು ಚಿತ್ರೀಕರಣವಾಗಿತ್ತು. ಬೆಂಗಳೂರಿನ ಸುತ್ತಮುತ್ತ ಚಿತ್ರದ ಹಲವು ಭಾಗದ ಚಿತ್ರೀಕರಣವಾಗಿತ್ತು. ನಿಖಿಲ್​ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ಅಭಿನಯಿಸುತ್ತಿದ್ದು, ಮಿಕ್ಕಂತೆ ಸಂಪದ, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ರಾಜೇಶ್ ನಟರಂಗ, ದತ್ತಣ್ಣ, ಶೋಭರಾಜ್ ಮುಂತಾದವರು ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಲಹರಿ ಫಿಲಂಸ್​ನಡಿ ಚಂದ್ರು ಮನೋಹರನ್ ನಿರ್ವಿುಸುತ್ತಿದ್ದು, ತೆಲುಗಿನ ಜನಪ್ರಿಯ ನಿರ್ದೇಶಕ ವಿಜಯ್ ಕುಮಾರ್ ಕೊಂಡಾ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ.ಇನ್ನು ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಶ್ರೀಷ ಕೂದುವಳ್ಳಿ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net