ನಿಖಿಲ್​ಗೆ ಕಶ್ಮೀರ ಲಹರಿ - ಕನ್ನಡಕ್ಕೆ ಹೊಸ ಬೆಡಗಿಯ ಪರಿಚಯ

Kashmira
Published on

ಬೆಂಗಳೂರು: ‘ಲಹರಿ ಮ್ಯೂಸಿಕ್’ ಸಂಸ್ಥೆಯ ನಿರ್ವಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ನೂತನ ಚಿತ್ರಕ್ಕೆ ಕಶ್ಮೀರ ಪರ್ದೇಶಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ನಾಯಕಿಯ ಬಗ್ಗೆ ಅಭಿಮಾನಿಗಳಲ್ಲಿ ಮೂಡಿದ್ದ ಕುತೂಹಲ ಸದ್ಯಕ್ಕೆ ತಣ್ಣಗಾಗಿದೆ.

ತೆಲುಗಿನ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಂಡ ಆಕ್ಷನ್-ಕಟ್ ಹೇಳಲಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳೆರಡರಲ್ಲೂ ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಟಿ, ಮುಂಬೈ ಬೆಡಗಿ ಕಶ್ಮೀರ ಪರ್ದೇಶಿ ಆಯ್ಕೆ ಆಗಿರುವುದರಿಂದ ಸ್ಯಾಂಡಲ್​ವುಡ್​ಗೆ ಮತ್ತೊಬ್ಬ ಪರಭಾಷಾ ನಟಿಯ ಪರಿಚಯ-ಪ್ರವೇಶ ಆದಂತಾಗಿದೆ.

2018ರಲ್ಲಿ ತೆಲುಗಿನಲ್ಲಿ ತೆರೆ ಕಂಡಿದ್ದ ನಾಗಶೌರ್ಯ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ನರ್ತನಶಾಲಾ’ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿರುವ ಕಶ್ಮೀರ, ಈ ಚಿತ್ರದ ಯಶಸ್ಸಿನ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೀಗ ಅವರನ್ನು ‘ಲಹರಿ ಮ್ಯೂಸಿಕ್’ ಸ್ಯಾಂಡಲ್​ವುಡ್​ಗೂ ಕರೆತಂದಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋಯಿನ್ ಪರಿಚಯ ಮಾಡಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನಾಯಕಿಯ ಪಾತ್ರ, ಲುಕ್ ಇತ್ಯಾದಿ ವಿವರಗಳನ್ನು ಚಿತ್ರತಂಡ ಸದ್ಯಕ್ಕೆ ಗುಟ್ಟಾಗಿರಿಸಿದೆ. ಇನ್ನು ಪ್ರೇಮಕಥೆಯ ಈ ಚಿತ್ರದಲ್ಲಿ ನಿಖಿಲ್ ಎಂದಿನಂತೆ ಭರ್ಜರಿ ಸಾಹಸಗಳಿಂದ ಅಬ್ಬರಿಸಲಿದ್ದಾರೆ. ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಿಖಿಲ್ ಅಭಿನಯಿಸುತ್ತಿದ್ದು, ಅವರ ಲುಕ್ ಇತ್ಯಾದಿ ಬಗ್ಗೆ ಇನ್ನಷ್ಟೇ ಮಾಹಿತಿ ಬಹಿರಂಗ ಆಗಬೇಕಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಈಗಾಗಲೇ ಶೂಟಿಂಗ್ ಕೂಡ ಆರಂಭಗೊಂಡಿದೆ. ಅಂದಹಾಗೆ ಈ ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಕನ್ನಡದ ಹುಡುಗಿ, ‘ಮಿಥುನ ರಾಶಿ’ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸಂಪದಾ ಆಯ್ಕೆ ಆಗಿದ್ದಾರೆ. ಅವರಿಲ್ಲಿ ಸಿಇಒ ಒಬ್ಬರ ಪುತ್ರಿ, ಶ್ರೀಮಂತ ಯುವತಿಯ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಕರ್ನಾಟಕ ಹಾಗೂ ಹೈದರಾಬಾದ್ ಎರಡೂ ಕಡೆ ಶೂಟಿಂಗ್ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net