

‘ಸ್ಪೋರ್ಟ್ಸ್ ಕುರಿತ ಕಥೆಯಾದ್ದರಿಂದ ನನಗೆ ಇಷ್ಟವಾಯಿತು. ಇಲ್ಲಿ ಹೀರೋ ನಿಖಿಲ್ ಬಾಸ್ಕೆಟ್ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸ್ಪೋರ್ಟ್ಸ್ ಜತೆಗೆ ಲವ್ ಕೂಡ ಇದೆ. ಯುವ ಸಮೂಹ ಹಾಗೂ ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆಯುವ ಸಿನಿಮಾ ಇದು..’ ಎನ್ನುತ್ತ ಒಂದು ದೊಡ್ಡ ಗ್ಯಾಪ್ ಬಳಿಕ ‘ಲಹರಿ ಮ್ಯೂಸಿಕ್’ ಸಿನಿಮಾ ನಿರ್ಮಾಣ ಮಾಡುತ್ತಿರುವ ಬಗ್ಗೆ ಹೇಳಿಕೊಂಡರು ಲಹರಿ ವೇಲು.
‘1997ರಲ್ಲಿ ನಾವು ನಮ್ಮ ಸಂಸ್ಥೆಯಿಂದ ಮೊದಲ ಸಿನಿಮಾ ನಿರ್ವಿುಸಿದ್ದೆವು. ಇದೀಗ ನಾಲ್ಕನೇ ಸಿನಿಮಾ. ಈ ಮಧ್ಯೆ 28 ವರ್ಷಗಳ ಗ್ಯಾಪ್ ಆಗಿತ್ತು. ಅಣ್ಣನ ಮಕ್ಕಳು ಮನಸು ಮಾಡಿದ್ದರಿಂದ ಮತ್ತೆ ಸಿನಿಮಾ ನಿರ್ವಣಕ್ಕೆ ಇಳಿಯುವಂತಾಯಿತು. ಈ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚಿನ ಒತ್ತು ಇರಲಿದೆ. ಸಿನಿಮಾ ಸೂಪರ್ ಆಗಿರಲಿದೆ, ಸಂಗೀತ ಅದ್ಭುತವಾಗಿರಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು ವೇಲು.
‘ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಇಲ್ಲಿ ಕಥೆಗೆ ಒತ್ತು ಕೊಟ್ಟಿದ್ದೇವೆ. ಈ ಚಿತ್ರದಲ್ಲಿ ಸಾಹಸ ವಿಭಿನ್ನವಾಗಿರಲಿದೆ. ನನಗೆ ತೆಲುಗು ಮಾತನಾಡಲು ಬರುತ್ತದೆ. ನಿರ್ದೇಶಕರು ಒಪ್ಪಿದರೆ ನಾನೇ ಡಬ್ಬಿಂಗ್ ಮಾಡಬಲ್ಲೆ. ಸದ್ಯ ನಾಲ್ಕು ಸಿನಿಮಾಗಳು ಕೈಯಲ್ಲಿವೆ. ವರ್ಷಕ್ಕೆ ಎರಡರಂತೆ ಸಿನಿಮಾಗಳು ಬಿಡುಗಡೆ ಅಗಲಿವೆ’ ಎಂದು ಮಾಹಿತಿ ನೀಡಿದರು ನಾಯಕ ನಿಖಿಲ್ ಕುಮಾರ್.
ತೆಲುಗು ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಂಡ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. ‘ಇದು ಸ್ಪೋರ್ಟ್ಸ್ ಎಲಿಮೆಂಟ್ ಇರುವ ಇಂಟೆನ್ಸ್ ಲವ್ ಸ್ಟೋರಿ. ನಾಯಕ ಮಿಡಲ್ ಕ್ಲಾಸ್ ಕುಟುಂಬದಲ್ಲಿನ ಬಾಸ್ಕೆಟ್ಬಾಲ್ ಪ್ಲೇಯರ್ ಆಗಿರುತ್ತಾನೆ.
ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ. ಕರ್ನಾಟಕ ಹಾಗೂ ಹೈದರಾಬಾದ್ ಎರಡೂ ಕಡೆ ಶೂಟಿಂಗ್ ನಡೆಯಲಿದೆ’ ಎಂದರು ನಿರ್ದೇಶಕರು. ‘ಇಲ್ಲಿ ನಾನು ಶ್ರೀಮಂತ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಚಿತ್ರದಲ್ಲಿ ಸಿಇಒ ಒಬ್ಬರ ಪುತ್ರಿ ಆಗಿ ನಟಿಸಲಿದ್ದೇನೆ’ ಎಂದರು ಚಿತ್ರದ ಎರಡನೇ ನಾಯಕಿ ಸಂಪದಾ. ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನಾಯಕಿಯ ಪಾತ್ರಕ್ಕೆ ಕಶ್ಮೀರ ಪರ್ದೇಶಿ ಆಯ್ಕೆ ಆಗಿದ್ದಾರೆ.