

ತಮಿಳುನಾಡು: ಸೂಪರ್ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ಜೈಲರ್' ನಿರೀಕ್ಷೆಗೂ ಮೀರಿದ ಗಳಿಕೆಯನ್ನು ಕಾಣುವುದರ ಜತೆಗೆ ಚಿತ್ರಮಂದಿರಗಳಲ್ಲಿ ಸತತ 4ನೇ ವಾರವು ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಈ ಭರ್ಜರಿ ಗೆಲುವಿನ ಬೆನ್ನಲ್ಲೇ ರಜನಿ ನಟಿಸಲಿರುವ 170ನೇ ಚಿತ್ರದ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ.
'ಜೈಲರ್' ಯಶಸ್ಸಿನ ಬೆನ್ನಲ್ಲೇ ಇದೀಗ ರಜನಿಕಾಂತ್ ನಟಿಸಲಿರುವ 170ನೇ ಚಿತ್ರ 'ತಲೈವರ್ 170' ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸಂಗತಿಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. 'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿ.ಜೆ. ಜ್ಞಾನವೇಲ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವದಂತಿಯೊಂದು ತಲೈವಾ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.
'ತಲೈವರ್ 170' ಚಿತ್ರದಲ್ಲಿ ನಟ ಶರ್ವಾನಂದ್ ಅಥವಾ ನಾನಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಿದಾಡಿವೆ. ಈ ಇಬ್ಬರು ನಟರ ಪೈಕಿ ಒಬ್ಬರು ರಜನಿಕಾಂತ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೀರಿದ ಸುದ್ದಿಯೊಂದು ಶರ್ವಾ ಅಥವಾ ನಾನಿ ಇಬ್ಬರೂ ನಟಿಸುವುದು ಅನುಮಾನ! ಅವರ ಬದಲಿಗೆ ನಟ ರಾಣಾ ದಗ್ಗುಬಾಟಿ ಅಭಿನಯಿಸಲಿದ್ದಾರೆ ಎಂದು ತಿಳಿಸಿದೆ. ಸದ್ಯ ಈ ಗೊಂದಲಗಳಿಗೆ ತೆರೆ ಎಳೆಯಲು ಚಿತ್ರತಂಡ ಅಧಿಕೃತ ಮಾಹಿತಿಯನ್ನು ಘೋಷಿಸುವವರೆಗೂ ಕಾಯಬೇಕಿದೆ.
ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬರಲಿರುವ 'ತಲೈವರ್ 170' ಚಿತ್ರದಲ್ಲಿ ಫಹದ್ ಫಾಸಿಲ್, ಮಂಜು ವಾರಿಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ,(ಏಜೆನ್ಸೀಸ್).