ಹೊಸ ಹೆಜ್ಜೆ ಇಟ್ಟ ಜಯಶ್ರೀ

ullasa 2
Published on

ಬೆಂಗಳೂರು: ‘ನನಗೆ ಬೇಕಾಗಿರುವುದು ಸಾವು. ನನಗೆ ದಯಾಮರಣ ಕೊಡಿ ...’ ಎಂದು ಇತ್ತೀಚೆಗಷ್ಟೇ ಕೇಳಿದ್ದ ನಟಿ ಜಯಶ್ರೀ ರಾಮಯ್ಯ, ಇದೀಗ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕೇಶಮುಂಡನ ಮಾಡಿಸಿರುವ ಅವರು, ‘ಒಳ್ಳೆಯ ನಾಳಿನ ಕಡೆಗೆ ಮೊದಲ ಹೆಜ್ಜೆ ...’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜಯಶ್ರೀ ರಾಮಯ್ಯ ತೀವ್ರ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಖಿನ್ನತೆ ತಡೆದುಕೊಳ್ಳಲಾಗುತ್ತಿಲ್ಲ, ಜೀವನ ಸಾಕಾಗಿದೆ ಎಂದು ಹೇಳಿಕೊಂಡಿದ್ದರು. ಇದರಿಂದ ಅವರ ಆಪ್ತರು ಸಾಕಷ್ಟು ಆತಂಕಗೊಂಡಿದ್ದರು. ಆ ನಂತರ ಇನ್ನೊಂದು ವಿಡಿಯೋದಲ್ಲಿ ಮಾತನಾಡಿದ್ದ ಅವರು, ‘ನನಗೆ ಧನಸಹಾಯದ ಅವಶ್ಯಕತೆ ಇಲ್ಲ. ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ನನಗೀಗ ಬೇಕಿರುವುದು ಸಾವು. ತುಂಬಾ ಖಿನ್ನತೆಗೊಳಗಾಗಿದ್ದೇನೆ. ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ದಯಾಮರಣ ಕೊಡಿ’ ಎಂದು ಕೇಳಿದ್ದರು. ಈ ವಿಷಯವಾಗಿ, ನಟ ಸುದೀಪ್ ಸೇರಿದಂತೆ ಹಲವರು ಅವರಿಗೆ ಧೈರ್ಯ ತುಂಬಿದ್ದರು. ಹೊಸ ಭರವಸೆಗಳೊಂದಿಗೆ ಬದುಕು ಪ್ರಾರಂಭಿಸಲು ಸಲಹೆ ನೀಡಿದ್ದರು. ಅದರಂತೆ, ಜಯಶ್ರೀ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಮೊದಲ ಹಂತವಾಗಿ ತಲೆ ಬೋಳಿಸಿಕೊಂಡಿರುವ ಅವರು, ಆ ಫೋಟೋ ಹಂಚಿಕೊಂಡಿದ್ದಾರೆ.

ಚೇತರಿಸಿಕೊಳ್ಳುತ್ತಿರುವ ವಿಜಯಲಕ್ಷ್ಮೀ: ಇನ್ನು ಆತ್ಮಹತ್ಯೆ ಪ್ರಯತ್ನ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ವಿಜಯಲಕ್ಷ್ಮೀ ಸಹ ಇದೀಗ ಆರೋಗ್ಯವಾಗಿದ್ದಾರೆ. ಈ ಕುರಿತು ಆಸ್ಪತ್ರೆಯಿಂದಲೇ ಮಾತನಾಡಿರುವ ಅವರು, ತಮ್ಮ ಆತ್ಮಹತ್ಯೆ ಪ್ರಯತ್ನವನ್ನು ಹಲವರು ರಾಜಕೀಯ ಗೊಳಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ‘ನಾನು ಸಾವಿನ ವಿಚಾರದಲ್ಲಿ ನಾಟಕ ಮಾಡುತ್ತಿಲ್ಲ. ನನಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ನಾನು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದೇನೆ. ಯಾರದೋ ಅಣತಿಯ ಮೇರೆಗೆ ಇವೆಲ್ಲಾ ಮಾಡುತ್ತಿಲ್ಲ. ನನ್ನ ಆತ್ಮಹತ್ಯೆ ಪ್ರಯತ್ನವನ್ನು ರಾಜಕೀಯಗೊಳಿಸಿ, ಬಾಯಿಗೆ ಬಂದಂತೆ ಮಾತನಾಡಬೇಡಿ’ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net