

ಬೆಂಗಳೂರು: ಅಕ್ಷಯ್ ಕುಮಾರ್ ಅಭಿನಯದ ‘ಲಕ್ಷ್ಮೀ ಬಾಂಬ್’ ಈಗಾಗಲೇ ಒಂದು ದಾಖಲೆ ಬರೆದಿದೆ. ಡಿಸ್ನಿ ಹಾಟ್ಸ್ಟಾರ್ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು 125 ಕೋಟಿ ಕೊಟ್ಟು ಖರೀದಿಸಿದ್ದು, ಅತೀ ಹೆಚ್ಚು ಮೊತ್ತಕ್ಕೆ ಮೊತ್ತಕ್ಕೆ ಮಾರಾಟವಾದ ಮೊದಲ ಭಾರತೀಯ ಚಿತ್ರ ಎಂಬ ದಾಖಲೆಗೆ ಈ ಚಿತ್ರ ಪಾತ್ರವಾಗಿದೆ.
ಈಗ ‘ಲಕ್ಷ್ಮೀ ಬಾಂಬ್’ನ ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದ್ದು, ಒಂದೇ ದಿನಕ್ಕೆ 70 ಲಕ್ಷ ವೀಕ್ಷಣೆ ಪಡೆದ ಮೊದಲ ಭಾರತೀಯ ಟ್ರೇಲರ್ ಎಂಬ ದಾಖಲೆಯನ್ನೂ ಈ ಚಿತ್ರ ಬರೆದಿದೆ. ಟ್ರೇಲರ್ ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಮಿಳಿನ ‘ಮುನಿ’ ಚಿತ್ರದ ರೀಮೇಕ್ ಆದ ‘ಲಕ್ಷ್ಮೀ ಬಾಂಬ್’ ಚಿತ್ರವನ್ನು ಮೂಲ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದ ರಾಘವ ಲಾರೆನ್ಸ್ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರವನ್ನು ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ತೀರ್ವನವಾಗಿತ್ತಾದರೂ, ಕರೊನಾ ಹಾವಳಿಯಿಂದ ಚಿತ್ರಪ್ರದರ್ಶನ ತಡವಾದ ಹಿನ್ನೆಲೆಯಲ್ಲಿ, ಈ ಚಿತ್ರವನ್ನು ಓಟಿಟಿಯಲ್ಲಿ ಮೊದಲು ಬಿಡುಗಡೆ ಮಾಡುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ, ಶರದ್ ಕೇಳ್ಕರ್, ಅಶ್ವಿನಿ ಕಲ್ಸೇಕರ್ ಮುಂತಾದವರು ಅಭಿನಯಿಸಿರುವ ಈ ಚಿತ್ರವು ನವೆಂಬರ್ 10ರಂದು ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ. (ಏಜನ್ಸೀಸ್)