

ಬೆಂಗಳೂರು: ಇನ್ನೇನು ನಾಳೆ (ಜ. 8) ‘ರಾಕಿಂಗ್ ಸ್ಟಾರ್’ ಯಶ್ ಬರ್ತ್ಡೇ ಬಂದೇ ಬಿಡ್ತು. ‘ಕೆಜಿಎಫ್’ ಸಿನಿಮಾ ತಂಡದಿಂದ ಟೀಸರ್ ಉಡುಗೊರೆ ಸಿಕ್ಕೇ ಸಿಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.
ಆದರೆ, ಆ ಸುದ್ದಿ ಈಗ ಸುಳ್ಳಾಗಿದೆ. ಅರ್ಥಾತ್, ಯಶ್ ಜನ್ಮದಿನಕ್ಕೆ ಟೀಸರ್ ಬದಲು ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾ್ಯನ್ ಹಾಕಿದೆ. ಅಷ್ಟಕ್ಕೂ ಟೀಸರ್ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಭಿಮಾನಿ ವಲಯದಲ್ಲಿ ಟೀಸರ್ ಬರಲಿದೆ ಎಂಬ ಗುಲ್ಲೆದ್ದಿತ್ತು.
ಆ ಸುದ್ದಿಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ. ‘ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಟೀಸರ್ ನೀಡಬೇಕಾಗಿರುವುದು ನಮ್ಮ ಹೊಣೆ. ತರಾತುರಿಯಲ್ಲಿ ಟೀಸರ್ ಬಿಡುಗಡೆಗಾಗಿ ಗುಣಮಟ್ಟದಲ್ಲಿ ರಾಜಿ ಆಗಬಾರದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜ.8ರ ಬೆಳಗ್ಗೆ 10.08ಕ್ಕೆ ಚಿತ್ರದ 2ನೇ ಪೋಸ್ಟರ್ ಬಿಡುಗಡೆ ಆಗಲಿದೆ.’ ಎಂದು ಹೇಳಿದ್ದಾರೆ. ಸದ್ಯ ಆಂಧ್ರಪ್ರದೇಶದ ಕಡಪದಲ್ಲಿ ‘..ಚಾಪ್ಟರ್ 2’ ಶೂಟಿಂಗ್ ನಡೆಯುತ್ತಿದ್ದು, ಇಡೀ ತಂಡ ಅಲ್ಲೇ ಬಿಡಾರ ಹೂಡಿದೆ. ಬರ್ತ್ಡೇ ನಿಮಿತ್ತ ಜ. 7ಕ್ಕೆ ಇಡೀ ತಂಡ ಬೆಂಗಳೂರಿಗೆ ಆಗಮಿಸಲಿದೆ.
216 ಅಡಿ ಕಟೌಟ್, 5000 ಕೆ.ಜಿ. ಕೇಕ್
ಯಶ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಬೆಂಗಳೂರಿನ ಪಂತರಪಾಳ್ಯ ಬಳಿಯ ನಂದಿ ಲಿಂಕ್ ಮೈದಾನದಲ್ಲಿ ಯಶ್ ಅವರ 216 ಅಡಿ ಎತ್ತರದ ಬೃಹತ್ ಕಟೌಟ್ ನಿರ್ವಿುಸಲಾಗಿದ್ದು, ಅದರ ಮುಂದೆ ಯಶ್ ಅವರಿಂದ 5,000 ಕೆ.ಜಿ. ತೂಕದ ಕೇಕ್ ಕಟ್ ಮಾಡಿಸುವ ಯೋಜನೆಯನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ.