ಶುಕ್ರವಾರದಿಂದ ಬರಲಿದೆ ಹೊಸ ಪೊಗರು

Pogaru
Published on

ಬೆಂಗಳೂರು: ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದ್ದು, ಕ್ಷಮಾಪಣೆ ಕೇಳುವುದರ ಜತೆಗೆ ಆ 14 ದೃಶ್ಯಗಳನ್ನು ಕತ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರು ಆಗ್ರಹಿಸಿದ್ದು ಗೊತ್ತೇ ಇದೆ. ಈಗ ಆ ಆಕ್ಷೇಪಾರ್ಹ 14 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಿದ್ದು, ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳಿಸಿಕೊಡಲಾಗಿದೆ. ಗುರುವಾರ ಸೆನ್ಸಾರ್ ಮಂಡಳಿಯಿಂದ ಹೊಸ ಪ್ರಮಾಣಪತ್ರ ಸಿಗಲಿದ್ದು, ಎಡಿಟ್ ಆಗಿರುವ ಹೊಸ ಚಿತ್ರ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ.

ಧ್ರುವ ಅಭಿಮಾನಿಗಳ ಮುತ್ತಿಗೆ: ಚಿತ್ರತಂಡದವರು ಕ್ಷಮೆ ಕೇಳಿದರೂ, ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗುತ್ತಿದೆ ಎಂದು ಧ್ರುವ ಸರ್ಜಾ ಅಭಿಮಾನಿಗಳು ಬುಧವಾರ ಬೆಳಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಧ್ರುವ ಅಭಿಮಾನಿಗಳ ಜತೆಗೆ ಅಂಬೇಡ್ಕರ್ ಸೇನೆಯವರು ಸಹ ಕೈಜೋಡಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಅಧ್ಯಕ್ಷ ಮೂರ್ತಿ, ‘ಸಿನಿಮಾ ಎಂದರೆ ಕೆಲವೊಮ್ಮೆ ಇಂತಹ ದೃಶ್ಯಗಳನ್ನು ಮಾಡಬೇಕಾಗುತ್ತದೆ. ಈಗಾಗಲೇ ಚಿತ್ರದ ನಿರ್ದೇಶಕರು ಮತ್ತು ನಿರ್ವಪಕರು ಕ್ಷಮೆ ಕೇಳಿದ್ದಾರೆ. ಆದರೂ ಇಂತಹ ದೃಶ್ಯಗಳನ್ನು ಕೆಲವರು ಬಳಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ವಿಷಯವಾಗಿ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಸಹ ಮಾತನಾಡಿದ್ದಾರೆ. ‘ಚಿತ್ರತಂಡದವರು ಆಕ್ಷೇಪಾರ್ಹ ದೃಶ್ಯಗಳನ್ನು ಕಟ್ ಮಾಡಿದ್ದು, ಚಿತ್ರ ಮತ್ತೆ ಹೊಸದಾಗಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಹಳೆಯ ವಿಷಯವನ್ನಿಟ್ಟುಕೊಂಡು ಅಪಪ್ರಚಾರ ಮಾಡಿದರೆ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net