'ಸಿನಿಬಜಾರ್'ನಲ್ಲಿ 25 ರೂ.ಗೆ ಎಷ್ಟು ಬೇಕಾದರೂ ಸಿನಿಮಾ ನೋಡಿ ...

Cine Bazaar 1
Published on

ಬೆಂಗಳೂರು: ಕನ್ನಡದಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ಆಪ್​ಗಳು ಹೊಸದಾಗಿ ಹುಟ್ಟಿಕೊಂಡಿವೆ. ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್​ ಬಣಕಾರ್​ ಹಾಗೂ ಆನ್​​ಲೈನ್ ಭಾಸ್ಕರ್ ಎಂದೇ ಖ್ಯಾತರಾಗಿರುವ ಭಾಸ್ಕರ್ ವೆಂಕಟೇಶ್ ಈಗ 'ಸಿನಿಬಜಾರ್​' ಎಂಬ ಹೊಸ ಆಪ್​ ಶುರು ಮಾಡಿದ್ದಾರೆ. ಇತ್ತೀಚೆಗೆ ನಟ ಶ್ರೀನಗರ ಕಿಟ್ಟಿ ಈ ಆಪ್​ ಬಿಡುಗಡೆ ಮಾಡಿದ್ದಾರೆ.

ಈ ಆಪ್ ನಲ್ಲಿ ಸಿನಿಮಾ ವೀಕ್ಷಣೆಗೆ ತಗಲುವ ವೆಚ್ಚ ಕೇವಲ 25ರಿಂದ 30 ರೂ. ಮಾತ್ರ. 24 ಗಂಟೆಗಳ ಅವಧಿಯಲ್ಲಿ ಎಷ್ಟು ಬೇಕಾದರೂ ಸಿನಿಮಾ ನೋಡಬಹುದಾಗಿದೆ. ಇಲ್ಲಿ ಚಿತ್ರಗಳನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಕೂಡ ನಿರ್ಮಾಪಕರಿಗೆ ತಿಳಿಯಲಿದೆ. ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಿಸಲಾಗಿದೆ.

'ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈ ಆಪ್ ನಲ್ಲಿದೆ. ಈ ಆಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು‌. ಒಟ್ಟಿನಲ್ಲಿ ಕನ್ನಡ ನಿರ್ಮಾಪಕರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ' ಎನ್ನುತ್ತಾರೆ ಭಾಸ್ಕರ್ ವೆಂಕಟೇಶ್.

'ಭಾಸ್ಕರ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದಾಗ ಇದರಿಂದ ನಿರ್ಮಾಪಕರಿಗೆ ಹಾಗೂ ನೋಡುಗರಿಗೆ ಅನುಕೂಲವಿದೆ ಎಂದು ತಿಳಿಯಿತು. ನಾನು ಭಾಸ್ಕರ್ ಅವರ ಜೊತೆ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದೇನೆ' ಎನ್ನುತ್ತಾರೆ ಉಮೇಶ್ ಬಣಕಾರ್.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ ಮುಂತಾದವರು ಹಾಜರಿದ್ದು, 'ಸಿನಿಬಜಾರ್' ತಂಡಕ್ಕೆ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net