

ಬೆಂಗಳೂರು: ‘ಗೂಳಿಹಟ್ಟಿ’ ‘ಹಾಲು ತುಪ್ಪ’ ಮತ್ತು ‘ಉಡುಂಬ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಪವನ್ ಶೌರ್ಯ, ಈಗ ಸದ್ದಿಲ್ಲದೆ ‘ನಾಚಿ’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಶಶಾಂಕ್ ರಾಜ್ ನಿರ್ದೇಶಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತವೂ ಆಗಿದೆ. ವಿಶೇಷವೆಂದರೆ, ಚಿತ್ರದ ಮುಹೂರ್ತಕ್ಕೂ ಮುನ್ನವೇ 35 ದಿನಗಳ ಚಿತ್ರೀಕರಣ ಮುಗಿದಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅ.29ರಂದು ಅದ್ಧೂರಿ ಮುಹೂರ್ತ ಮಾಡುವ ಮೂಲಕ ಚಿತ್ರ ಪ್ರಾರಂಭಿಸಬೇಕು ಎಂದು ಚಿತ್ರತಂಡ ಯೋಚಿಸಿತ್ತಂತೆ. ಅಂದು ಪುನೀತ್ ನಿಧನರಾದ ಕಾರಣ ಅದು ಸಾಧ್ಯವಾಗಿರಲಿಲ್ಲ. ಸರಳ ಪೂಜೆಯೊಂದಿಗೆ ಈ ಚಿತ್ರ ಶುರುವಾಗಿದ್ದು, ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದ್ದು, ಈ ಮಧ್ಯೆ ಮುಹೂರ್ತ ಸಮಾರಂಭ ಆಯೋಜಿಸುವ ಮೂಲಕ ಮತ್ತೊಮ್ಮೆ ಚಾಲನೆ ನೀಡಲಾಗಿದೆ. ಇಲ್ಲಿ ‘ನಾಚಿ’ ಎಂದರೆ ನಾಯಕಿಯ ಹೆಸರಂತೆ. ನಚಿತಾ ಎನ್ನುವುದು ಆಕೆಯ ಹೆಸರಾಗಿದ್ದು, ಎಲ್ಲರೂ ಪ್ರೀತಿಯಿಂದ ನಾಚಿ ಎಂದು ಕರೆಯುತ್ತಾರಂತೆ. ಅದೊಮ್ಮೆ ಮಲೆನಾಡಿನ ಪ್ರದೇಶವೊಂದರಲ್ಲಿ ಪ್ರಾಚ್ಯವಸ್ತು ಸಂಶೋಧನೆಗೆಂದು ಹೋದಾಗ, ಅಲ್ಲಿ ಏನಾಗುತ್ತದೆ ಎಂಬುದು ಚಿತ್ರದ ಕಥೆ.
ವಿಜ್ಞಾನ, ಕಾಮಿಡಿ, ಹಾರರ್ ಮುಂತಾದ ಅಂಶಗಳನ್ನು ಚಿತ್ರ ಒಳಗೊಂಡಿದ್ದು, ಒಟ್ಟಾರೆ ನಿಧಿಯೊಂದರ ಸುತ್ತ ಕಥೆ ಸುತ್ತುತ್ತದಂತೆ. ಇದಕ್ಕೂ ಮುನ್ನ ತೆಲುಗಿನ ಕೆಲವು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ಮೌರ್ಯಾನಿ, ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಚಿತ್ ಫಿಲಂಸ್ನಡಿ ವೆಂಕಟ್ ಗೌಡ ನಿರ್ವಿುಸುತ್ತಿದ್ದಾರೆ.