ನಾಳೆ ಮನಸಾರೆ ಉದಯ

Priyanka
Published on

ದಿನೇದಿನೆ ಹೊಸ ಕಥೆಗಳ ಪ್ರಯೋಗದಿಂದ ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಆಗಿರುವ ಉದಯ ವಾಹಿನಿ ಫೆ. 24ರಿಂದ ಮತ್ತೊಂದು ಹೊಸ ಧಾರಾವಾಹಿ ಆರಂಭಿಸುತ್ತಿದೆ. ಎರಡೂವರೆ ದಶಕಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ವಾಹಿನಿ ಸೋಮವಾರದಿಂದ ‘ಮನಸಾರೆ’ ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ. ಫೆ.24ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9ಕ್ಕೆ ‘ಮನಸಾರೆ’ ಪ್ರಸಾರವಾಗಲಿದೆ.

‘ಮನಸಾರೆ’ ಶೀರ್ಷಿಕೆಯಡಿ ಸಂಬಂಧಗಳ ಸುಂದರ ಕಥೆ ಹೇಳಲಾಗುತ್ತಿದೆ. ಅಪ್ಪನ ಪ್ರೀತಿಗೆ ಹವಣಿಸುವ ಹಿರಿಯ ಮಗಳು, ಪ್ರೀತಿಯ ಕಣಜ ಹೊತ್ತು ನಿಂತಿರುವ ಕಿರಿಯ ಪುತ್ರಿ, ಒಂಭತ್ತು ತಿಂಗಳು ಹೊತ್ತು ಹೆರದಿದ್ದರೂ ಕರುಳಬಳ್ಳಿಯಂತೆ ಕಾಪಾಡುವ ಮಲತಾಯಿ, ಅಕ್ಕತಂಗಿಯರ ಒಡನಾಟ ಈ ಕಥೆಯ ಪ್ರಮುಖಾಂಶ. ವರ್ಷಗಳಿಂದ ತನ್ನ ಕನಸುಗಳ ಕೋಟೆಗೆ ಬಣ್ಣ ತುಂಬಿ ಅಪ್ಪನ ಪ್ರೀತಿಗೆ ಕಾಯುತ್ತಿರುವ ಹೂಮನಸ್ಸಿನ ಹುಡುಗಿ ಈ ಕಥೆಯ ನಾಯಕಿ. ಎಲ್ಲ ಧಾರಾವಾಹಿಗಳಂತೆ ಇಲ್ಲಿ ಯಾವುದೇ ಖಳನಾಯಕಿಯರಿಲ್ಲ. ಯಾವುದೇ ಕಷ್ಟ-ಸವಾಲು ಎದುರಾದರೂ ಒಟ್ಟಾಗಿ ನಿಂತು ಎದುರಿಸುವ ಮಾದರಿ ಮಹಿಳಾಮಣಿಯರ ಘಟಕ ಈ ಧಾರಾವಾಹಿಯ ಜೀವಾಳ.

ಉದಯ ಟಿವಿಯಲ್ಲಿ ಈಗಾಗಲೇ ‘ಅವಳು’ ಧಾರಾವಾಹಿಯನ್ನು ಜನರಿಗರ್ಪಿಸಿ ಮನರಂಜನೆಯ ರಸದೌತಣ ಉಣಬಡಿಸಿರುವ ‘ಧ್ರುವ್ ಮೀಡಿಯಾ ಕ್ರಾಫ್ಟ್’ ಸಂಸ್ಥೆಯ ನಿಮಾಪಕ ಗುರುರಾಜ್ ಕುಲಕರ್ಣಿ ಮತ್ತೊಮ್ಮೆ ಹೊಸ ಬಗೆಯ ಕಥಾಪ್ರಯೋಗಕ್ಕೆ ಮುಂದಾಗಿದ್ದಾರೆ. ಕ್ಯಾಮರಾ ಕೈ ಚಳಕದಲ್ಲಿ ಗೆದ್ದಿರುವ ರವಿಕಿಶೋರ್ ನಿರ್ದೇಶನ ಮಾಡುತ್ತಿದ್ದು, ಗಿರಿಧರ್ ದಿವಾನ್ ಶೀರ್ಷಿಕೆ ಗೀತೆಯನ್ನು ಸಂಯೋಜನೆ ಮಾಡಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿರಿಯ ರಂಗಭೂಮಿ ಕಲಾವಿದೆ ಜಯಲಕ್ಷಿö, ನಟಿಯರಾದ ಯಮುನಾ ಶ್ರೀನಿಧಿ, ಸ್ವಾತಿ ವಿವಿಧ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ‘ಜೈ ಹನುಮಾನ್’ ಧಾರಾವಾಹಿಯಲ್ಲಿ ಮಿಂಚಿದ್ದ ಪ್ರಿಯಾಂಕ ಚಿಂಚೋಳಿ ಕಥೆಯ ನಾಯಕಿ. ತುಂಟ ಹುಡುಗಿಯಾಗಿ ಪ್ರಕೃತಿ ಮತ್ತು ನಾಯಕನಾಗಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕನಾಗಿ ಗುರುತಿಸಿಕೊಂಡಿರುವ ವಿಜಯ್ ಕೌಂಡಿಣ್ಯ ಹಾಗೂ ಕಿರುತೆರೆಯ ರಿಯಲ್ ಜೋಡಿಗಳಲ್ಲಿ ಒಂದಾದ ಸುನೇತ್ರಾ ಪಂಡಿತ್ ಮತ್ತು ರಮೇಶ್ ಪಂಡಿತ್ ‘ಮನಸಾರೆ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net