ವಿಂಡೋ ಸೀಟ್​ನಲ್ಲಿ ಸಂಜನಾ-ಅಮೃತಾ

LEAD
Published on

ಬೆಂಗಳೂರು:  ಉದಯೋನ್ಮುಖ ನಟಿಯರಾದ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಇದೀಗ ವಿಂಡೋ ಸೀಟ್ ಹಿಡಿದಿದ್ದಾರೆ. ಹಾಗಂತ ಅವರದ್ದು ಯಾವ ಬಸ್, ಎಲ್ಲಿಗೆ ಪ್ರಯಾಣ ಎಂದು ಕೇಳುವಂತಿಲ್ಲ. ಏಕೆಂದರೆ ಇಲ್ಲಿ ವಿಂಡೋ ಸೀಟ್ ಎಂಬುದು ಅವರು ಅಭಿನಯಿಸುತ್ತಿರುವ ನೂತನ ಸಿನಿಮಾದ ಶೀರ್ಷಿಕೆ. ಹೌದು.. ‘ವಿಂಡೋ ಸೀಟ್’ ಎಂಬ ನೂತನ ಚಿತ್ರದಲ್ಲಿ ನಾಯಕಿಯರಾಗಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ವಿಶೇಷವೆಂದರೆ ಇವರಿಬ್ಬರಿಗೆ ಆಕ್ಷನ್-ಕಟ್ ಹೇಳುತ್ತಿರುವುದು ಕೂಡ ಒಬ್ಬ ಯುವತಿಯೇ. ಅರ್ಥಾತ್, ‘ವಿಂಡೋ ಶೀಟ್’ ಮೂಲಕ ನಿರೂಪಕಿ-ನಟಿ ಶೀತಲ್ ಶೆಟ್ಟಿ ನಿರ್ದೇಶಕಿ ಆಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

ಮತ್ತೊಂದು ವಿಶೇಷ ಎಂದರೆ ಈ ಚಿತ್ರದ ನಾಯಕ, ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ. ಈ ಮೂಲಕ ನಟಿಯರಾದ ಸಂಜನಾ ಮತ್ತು ಅಮೃತಾ ಇದೇ ಮೊದಲ ಬಾರಿಗೆ ನಿರೂಪ್ ಜತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶೀತಲ್ ಶೆಟ್ಟಿ, ಈ ಸಿನಿಮಾ ನಿರ್ದೇಶನಕ್ಕೆಂದೇ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿ ಒಂದಷ್ಟು ಅನುಭವ ಪಡೆದು ಈ ಚಿತ್ರಕ್ಕೆ ಆಕ್ಷನ್- ಕಟ್ ಹೇಳುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ನಿರ್ದೇಶಕಿಯರು ಅತಿವಿರಳ. ಹೀಗಾಗಿ ಶೀತಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಬಗ್ಗೆ ಗಾಂಧಿನಗರಿಗರು ಕುತೂಹಲದಿಂದ ನೋಡುತ್ತಿದ್ದಾರೆ.

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿರುವ ಸಂಜನಾ, ಸದ್ಯ ದುನಿಯಾ ವಿಜಯ್ ನಿರ್ದೇಶಕ ಹಾಗೂ ನಾಯಕ ಆಗಿರುವ ‘ಸಲಗ’, ಅಜೇಯ್ ರಾವ್ ಅಭಿನಯದ ‘ಶೋಕಿವಾಲಾ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಇನ್ನು ‘ವಿಂಡೋ ಸೀಟ್’ ಮೂಲಕ ಮತ್ತಷ್ಟು ಬಿಜಿ ಆಗಲಿದ್ದಾರೆ. ಪ್ರಸ್ತುತ ಡಾಲಿ ಧನಂಜಯ್ ಅಭಿನಯದ ‘ಪಾಪ್​ಕಾರ್ನ್ ಮಂಕಿ ಟೈಗರ್’, ‘ಬಡವ ರಾಸ್ಕಲ್’ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಅಮೃತಾ, ಈ ಚಿತ್ರದ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಅಂದಹಾಗೆ, ‘ವಿಂಡೋ ಸೀಟ್’ ಬಗ್ಗೆ ಚಿತ್ರತಂಡ ಇದುವರೆಗೂ ಅಧಿಕೃತವಾಗಿ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net