

ಬೆಂಗಳೂರು: ಗಡಿನಾಡಿನ ಸಮಸ್ಯೆ ಇಂದು-ನಿನ್ನೆಯದಲ್ಲ. ಎಷ್ಟೇ ಪ್ರಯತ್ನಪಟ್ಟರೂ ಇದು ಬಗೆಹರಿದಿಲ್ಲ. ಹೀಗಾಗಿ ಗಡಿನಾಡ ಸಮಸ್ಯೆ, ಕನ್ನಡ ಭಾಷೆ, ಈ ನಾಡು-ನುಡಿಯ ಹಿರಿಮೆ ಬಗ್ಗೆ ತಿಳಿಸಲು ನಿರ್ಮಾಣವಾಗಿದೆ ‘ಗಡಿನಾಡು’ ಸಿನಿಮಾ.
ನಿರ್ದೇಶಕ ನಾಗ್ ಹುಣಸೋಡ್ ಚಿತ್ರತಂಡದ ಜತೆ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದರು. ‘ಹಿಂದಿನಿಂದಲೂ ಬೆಳಗಾವಿ ಗಡಿ ಬಗ್ಗೆ ಕರ್ನಾಟಕ- ಮಹಾರಾಷ್ಟ್ರ ಜನರಲ್ಲಿ ತಂಟೆ- ತಕರಾರು ಇದೆ. ಇದನ್ನು ಬಗೆಹರಿಸಲು ಪ್ರತಿ ಸರ್ಕಾರ ಯತ್ನಿಸಿದರೂ ಸಾಧ್ಯವಾಗಿಲ್ಲ. ಗಡಿನಾಡಿನ ತೊಂದರೆಯಿಂದ ಆಗುವ ಘಟನೆಗಳ ಸುತ್ತ ಚಿತ್ರಕಥೆ ರೂಪಿಸಲಾಗಿದೆ’ ಎಂದರು ನಾಗ್.
‘ಕನ್ನಡದ ಹುಡುಗ, ಮರಾಠಿ ಹುಡುಗಿ ನಡುವಿನ ಪ್ರೇಮಕಥೆಯೇ ಚಿತ್ರದ ಹೈಲೈಟ್. ವಿದ್ಯಾಭ್ಯಾಸ ಮುಗಿಸಿ ಬೆಳಗಾವಿಗೆ ಹೋಗುವ ನಾಯಕ, ಅಲ್ಲಿನ ಗಡಿ ಸಮಸ್ಯೆ ಕಂಡು ‘ಗಡಿನಾಡ ಸೇನೆ’ ಕಟ್ಟುತ್ತಾನೆ. ಈ ಮಧ್ಯೆ ಮರಾಠಿ ಹುಡುಗಿ ಜತೆ ಪ್ರೇಮ ಹುಟ್ಟುತ್ತದೆ. ಆಗ ಏನಾಗುತ್ತದೆ ಎಂಬುದು ಚಿತ್ರದ ಕಥೆ ಎಂದರು.
ನಾಯಕನಾಗಿ ಪ್ರಭು ಸೂರ್ಯ, ನಾಯಕಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ. ಚಿಕ್ಕೋಡಿ, ಅಥಣಿ, ಬೆಳಗಾವಿ ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ. ಚರಣ್ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘುರಾಜು ಖಳನಟರಾಗಿ ನಟಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಘು ಸೀರುಂಡೆ, ಮಮತಾ, ಪುಷ್ಪಾ ಸೇರಿ ಹಲವರು ನಟಿಸಿದ್ದಾರೆ.
‘ಕನ್ನಡ ನೆಲ-ಭಾಷೆ ಬಗ್ಗೆ ಅಭಿಮಾನ ತೋರಿಸುವ ಪಾತ್ರದಲ್ಲಿ ಅಭಿನಯಿಸಿದ್ದು ಖುಷಿ ಕೊಟ್ಟಿದೆ. ಭಾಷೆಯ ಪ್ರೀತಿ ಮತ್ತು ವೈಯುಕ್ತಿಕ ಜೀವನದ ಪ್ರೇಮ ಇಲ್ಲಿ ಮುಖಾಮುಖಿ ಆಗುತ್ತವೆ. ಇದೇ ಚಿತ್ರದ ವಿಶೇಷ’ ಎಂದರು ನಟ ಪ್ರಭು ಸೂರ್ಯ. ವಸಂತ್ ಮುರಾರಿ ದಳವಾಯಿ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ಎಲ್ವಿನ್ ಜೋಶ್ವಾ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿವೆ. ಗೌರಿವೆಂಕಟೇಶ್-ರವಿ ಸುವರ್ಣ ಛಾಯಾಗ್ರಹಣ, ವೆಂಕಿ ಸಂಕಲನ ಚಿತ್ರಕ್ಕಿದೆ. ಜ.24ಕ್ಕೆ ಸಿನಿಮಾ ತೆರೆಕಾಣಲಿದೆ.