ಅಷ್ಟಕ್ಕೂ ಆ ಅಸುರ ಯಾರು?

NB 3
Published on

ಬೆಂಗಳೂರು: ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಕುರಿತ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಬಂದು ಹೋಗಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ‘ಅಸುರ ಸಂಹಾರ’.

10ಕ್ಕೂ ಅಧಿಕ ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರದೀಪ್ ‘ಅಸುರ ಸಂಹಾರ’ಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಈ ಚಿತ್ರ ಶುಕ್ರವಾರ (ಫೆ. 28) ತೆರೆಕಾಣುತ್ತಿದ್ದು, ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ‘ಅತ್ಯಾಚಾರಕ್ಕೆ ಸಂಬಂಧಪಟ್ಟ ಕಥೆ ಈ ಚಿತ್ರದಲ್ಲಿರುವುದರಿಂದ ಸೆನ್ಸಾರ್​ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪದ್ಧತಿ ಜಾರಿಯಾಗಬೇಕು’ ಎಂದು ತಮ್ಮ ಮತ್ತು ಸಿನಿಮಾದ ಉದ್ದೇಶವನ್ನು ಹೇಳಿಕೊಂಡರು ಪ್ರದೀಪ್. ಈ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಹರ್ಷ ಅರಸ್ ಪದಾರ್ಪಣೆ ಮಾಡಿದ್ದು, ಖುಷಿ ಹಂಚಿಕೊಂಡರು.

‘ಮೂಲತಃ ನಾನು ಉದ್ಯಮಿ. ಒಳ್ಳೆಯ ಸಿನಿಮಾ ಮಾಡುವ ಪ್ಲಾ್ಯನ್ ಇತ್ತು. ಪ್ರದೀಪ್ ನನ್ನ ಸ್ನೇಹಿತ. ಅವರು ಬಂದು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಟ ಧರ್ಮಣ್ಣ ಈ ಚಿತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದಾರೆ’ ಎನ್ನುವ ಹರ್ಷ, ಈ ಚಿತ್ರದಲ್ಲಿ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಹರ್ಷಲ ಹನಿ ಅಭಿನಯಿಸಿದ್ದಾರೆ. ದೀಪಾ ಶೆಟ್ಟಿ, ಶಿವು ಬಾಲಾಜಿ, ವಿನಯ್, ರವಿ ಪಾತ್ರವರ್ಗದಲ್ಲಿದ್ದು, ಲೋಕಿ ಸಂಗೀತ, ಸಂಯೋಜನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net