ನಾಗಚೈತನ್ಯ ಲೈಫ್​ನಲ್ಲಿ ಹೊಸ ಹುಡುಗಿ?; ಶೋಭಿತಾ ಜತೆ ಕಾಣಿಸಿಕೊಂಡ ನಾಗ್

Naga Chaithanya
Published on

ನಾಲ್ಕು ವರ್ಷಗಳ ದಾಂಪತ್ಯ ಜೀವನದ ಬಳಿಕ ನಟ ನಾಗಚೈತನ್ಯ ಮತ್ತು ನಟಿ ಸಮಂತಾ 2021ರಲ್ಲಿ ದೂರಾಗಿದ್ದರು. ಇದು ಇಬ್ಬರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಅದಾಗಿ ಒಂದೂವರೆ ವರ್ಷದಲ್ಲೇ ನಾಗಚೈತನ್ಯ ಜೀವನದಲ್ಲಿ ಹೊಸ ಹುಡುಗಿಯ ಪ್ರವೇಶವಾಗಿದೆ.

ಹೌದು, ಸದ್ಯ ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿರುವ ಸುದ್ದಿಯ ಪ್ರಕಾರ ನಾಗಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಲ ಡೇಟಿಂಗ್ ಮಾಡುತ್ತಿದ್ದಾರಂತೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ಹಲವು ಬಾರಿ ಒಟ್ಟಿಗೇ ಕಾಣಿಸಿಕೊಂಡಿದೆ. ಹೈದರಾಬಾದ್​ನ ಜುಬಿಲಿ ಹಿಲ್ಸ್ ನಲ್ಲಿ ನಾಗಚೈತನ್ಯ ಐಶಾರಾಮಿ ಬಂಗಲೆ ಕಟ್ಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶೋಭಿತಾರನ್ನು ಕರೆದುಕೊಂಡು ಹೋಗಿ ನಿರ್ಮಾಣ ಹಂತದಲ್ಲಿರುವ ಮನೆಯ ಟೂರ್ ಮಾಡಿಸಿದ್ದಾರೆ ನಾಗ್. ಬಳಿಕ ಇಬ್ಬರೂ ಒಂದೇ ಕಾರ್​ನಲ್ಲಿ ಅಲ್ಲಿಂದ ಹೊರಟರಂತೆ. ‘ಮೇಜರ್’ ಚಿತ್ರದ ಪ್ರಚಾರದ ವೇಳೆ ಹಾಗೂ ಶೋಭಿತಾ ಹುಟ್ಟುಹಬ್ಬದ ಸಮಯದಲ್ಲೂ ನಾಗ್ ಅವರ ಜತೆಯಲ್ಲಿದ್ದರು ಎನ್ನಲಾಗಿದೆ.

ಟ್ರೋಲ್​ಗಳಿಗೆ ಸ್ಯಾಮ್ ಚಾಟಿ: ಮತ್ತೊಂದೆಡೆ ನಾಗ್ ಮತ್ತು ಶೋಭಿತಾ ಸುದ್ದಿ ಹರಡಲು ಸಮಂತಾ ಅವರ ಪಿಆರ್ ತಂಡವೇ ಕಾರಣ ಎಂದು ನಾಗಚೈತನ್ಯ ಅಭಿಮಾನಿಗಳು ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಮಂತಾ, ‘ಹುಡುಗಿಯ ಬಗ್ಗೆ ರೂಮರ್ ಹಬ್ಬಿದ್ದರೆ ಅದು ನಿಜವೇ ಇರಬೇಕು ಅಂತೀರಾ. ಹುಡುಗನ ಬಗ್ಗೆ ಸುದ್ದಿ ಹಬ್ಬಿದ್ದರೆ, ಅದನ್ನು ಹುಡುಗಿಯೇ ಹಬ್ಬಿಸಿದ್ದಾಳೆ ಅಂತೀರಾ. ಇಬ್ಬರೂ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೀವೂ ಗಮನ ಹರಿಸಬೇಡಿ. ನಿಮ್ಮ ಕೆಲಸ, ಕುಟುಂಬದ ಬಗ್ಗೆ ಗಮನ ಹರಿಸಿ ...’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net