ಚಿತ್ರರಂಗದಲ್ಲಿ ಮತ್ತೊಂದು ಬಜಾರ್

NB 5
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ‘ಬಜಾರ್’, ‘ಮಾಯಾ ಬಜಾರ್’, ‘ಮೀನಾ ಬಜಾರ್’ ಸಿನಿಮಾ ಶೀರ್ಷಿಕೆಗಳು ಹೊಸದೇನಲ್ಲ. ಇದೀಗ ಆ ಸಾಲಿಗೆ ಮತ್ತೊಂದು ಬಜಾರ್ ಸೇರ್ಪಡೆಗೊಂಡಿದೆ. ಅಂದರೆ, ‘ಜನತಾ ಬಜಾರ್’ ಶೀರ್ಷಿಕೆಯ ಸಿನಿಮಾ ಮಾಡಲು ತಂಡವೊಂದು ಮುಂದಾಗಿದ್ದು, ಇತ್ತೀಚೆಗಷ್ಟೇ ಅದರ ಮುಹೂರ್ತ ನೆರವೇರಿದೆ.

ಉದ್ಯಮಿ ಕೆ.ಎಂ. ಮುರಳಿ ಅವರ ನಿರ್ವಣದ ಈ ಸಿನಿಮಾಗೆ ಆಕ್ಷನ್-ಕಟ್ ಹೇಳುವ ಮೂಲಕ ಆರ್.ಜೆ. ಪ್ರದೀಪ ಎಂಬುವರು ನಿರ್ದೇಶಕರಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರತಂಡದಲ್ಲಿ ಬಹುತೇಕ ಹೊಸಬರೇ ಇದ್ದು, ಸಿನಿಮಾದ ಮುಕ್ಕಾಲು ಕಥೆ ಮಾರುಕಟ್ಟೆಯಲ್ಲೇ ನಡೆಯಲಿದೆ. ‘ವಿಧವೆಯೊಬ್ಬರು ಇಬ್ಬರು ಪುತ್ರರೊಂದಿಗೆ ವ್ಯಾಪಾರ ನಡೆಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿರುವಾಗ ವ್ಯಕ್ತಿಯೊಬ್ಬನಿಂದ ತೊಂದರೆಗೆ ಸಿಲುಕುತ್ತಾರೆ. ಇದರಿಂದ ಆಕೆಯ ಮಕ್ಕಳು ಹೇಗೆ ಹೊರಬರುತ್ತಾರೆ, ಆ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾರೆ ಎಂಬುದೇ ಚಿತ್ರದ ಕಥಾಹಂದರ’ ಎನ್ನುತ್ತಾರೆ ನಿರ್ದೇಶಕ ಪ್ರದೀಪ.

ಸಸ್ಪೆನ್ಸ್-ಥ್ರಿಲ್ಲರ್​ನ ಈ ಸಿನಿಮಾದಲ್ಲಿ ರಾಹುಲ್ ಅರ್ಜುನ್ ನಾಯಕ ಹಾಗೂ ಅದಿತಿ ನಾಯಕಿ. ಕುಮಾರ್, ಅಶ್ವಿತ, ವಿನಯ್, ರಘು, ಪ್ರಜ್ವಲ್, ಕಿರಣ್, ಪವನ್ ಮುಂತಾದವರು ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಶಾಸಕ ಎಸ್.ಆರ್. ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net