

ದಢೂತಿ ದೇಹ ನನ್ನದಾಗಿದ್ದರೂ ಡ್ಯೂಪ್ ಬಳಸದೆ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದೇನೆ. ಇನ್ನು ಜನರ ಮೆಚ್ಚುಗೆಗೆ ಬಿಟ್ಟಿದ್ದು ಎನ್ನುತ್ತ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ನಾಯಕ ಹರಿಪ್ರಸಾದ್. ಅಷ್ಟಕ್ಕೂ ನಾಯಕನಿಗೆ ಇಲ್ಲಿ ದಢೂತಿ ದೇಹ ಇರುವುದಕ್ಕೂ ಕಾರಣವಿದೆ. ಏಕೆಂದರೆ ಇಲ್ಲಿನ ಕಥೆಯೇ ಅಂಥದ್ದು.
ಯಾವ ಜಿಮ್ ಹೋದರೂ ದೇಹ ತೂಕ ಇಳಿಯದು ಎಂಬುದನ್ನು ಅರಿತ ನಾಯಕನ ಪ್ರೇಮಕಥಾನಕವೇ ಈ ಚಿತ್ರದ ಕಥಾಹಂದರ. ಅಂದಹಾಗೆ ಈ ಚಿತ್ರದ ಶೀರ್ಷಿಕೆ ಶಾರ್ಟ್ ಆಂಡ್ ಸ್ಲಿಮ್ ಅರ್ಥಾತ್ ‘ಎಂಆರ್ಪಿ’ ಎಂಬುದು ಚಿತ್ರದ ಟೈಟಲ್.
ಎಂಆರ್ಪಿ ಚಿತ್ರದ ಟ್ರೇಲರನ್ನು ಇತ್ತೀಚೆಗೆ ನಟ ಶರಣ್ ಹಾಗೂ ದಿನಕರ್ ತೂಗುದೀಪ ಬಿಡುಗಡೆ ಮಾಡಿದರು. ನನ್ನ ಬದುಕಿನ ಮೊದಲ ತಂಡ ಇಲ್ಲಿದೆ. ಸಿನಿಮಾದವರೊಂದಿಗೆ ಬೆರೆಯುವುದು ಹೇಗೆ ಎಂಬ ಗೊಂದಲದಲ್ಲಿದ್ದ ನನಗೆ ಶ್ರೀಧರ್ ಎರಡೇ ದಿನಗಳಲ್ಲಿ ಆತ್ಮೀಯರಾಗಿದ್ದರು. ಇದೇ ತಂಡದ ಹರಿ ಈ ಸಿನಿಮಾಗೆ ನಾಯಕ ಎಂಬುದು ಹೆಮ್ಮೆಯ ಸಂಗತಿ ಎಂದು ಚಿತ್ರತಂಡಕ್ಕೆ ಶರಣ್ ಶುಭ ಹಾರೈಸಿದರು.
ಈ ಚಿತ್ರಕ್ಕೆ ನಿರ್ದೇಶಕ ಬಾಹುಬಲಿ ಆಕ್ಷನ್-ಕಟ್ ಹೇಳಿದ್ದು, ಸಿನಿಮಾದ ಕಥೆ-ಚಿತ್ರಕಥೆ ಕೂಡ ಅವರದ್ದೇ. ‘ನಾವೆಲ್ಲ ವಾರಕ್ಕೆ ಎರಡು ಬಾರಿಯಾದರೂ ಭೇಟಿ ಆಗುತ್ತೇವೆ’ ಎಂದು ಚಿತ್ರತಂಡದೊಂದಿಗಿನ ತಮ್ಮ ಒಡನಾಟದ ಬಗ್ಗೆ ಹೇಳಿಕೊಂಡರು ದಿನಕರ್ ತೂಗುದೀಪ. ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್, ಆನಂದ್ ಆಡಿಯೋದ ಶ್ಯಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.
ಆದರೆ ನಾಯಕಿ ಚೈತ್ರಾ ರೆಡ್ಡಿ ಗೈರಾಗಿದ್ದರು. ಈ ಚಿತ್ರಕ್ಕೆ ಎಂ.ಡಿ. ಶ್ರೀಧರ್, ಎ.ವಿ. ಕೃಷ್ಣಕುಮಾರ್, ಎನ್.ಜಿ. ಮೋಹನ್ಕುಮಾರ್ ಮತ್ತು ರಂಗಸ್ವಾಮಿ ಜತೆಯಾಗಿ ಬಂಡವಾಳ ಹೂಡಿದ್ದಾರೆ.