ನೇಹಾ ಶೆಟ್ಟಿ ಅಭಿನಯದ ತೆಲುಗು ಸಿನಿಮಾ ಶುರು

Neha
Published on

ಬೆಂಗಳೂರು: ಕನ್ನಡದ ‘ಮುಂಗಾರು ಮಳೆ 2’ ಸಿನಿಮಾ ಬಳಿಕ ಟಾಲಿವುಡ್ ಕಡೆಗೆ ಮುಖ ಮಾಡಿದ್ದ ನಟಿ ನೇಹಾ ಶೆಟ್ಟಿ, ಸದ್ಯ ತೆಲುಗು ನಾಡಿನಲ್ಲಿಯೇ ಒಂದಾದ ಮೇಲೊಂದರಂತೆ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ‘ನರುಡಿ ಬ್ರತುಕೆ ನಟನಾ’ ಸಿನಿಮಾ ಸೆಟ್ಟೇರಿದ್ದು, ಮುಹೂರ್ತವನ್ನೂ ಮುಗಿಸಿಕೊಂಡಿದೆ. 2018ರಲ್ಲಿ ‘ಮೆಹಬೂಬ’ ಸಿನಿಮಾ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ನೇಹಾ, ಇದೀಗ ಎರಡು ವರ್ಷದ ಬಳಿಕ ‘ನರುಡಿ ಬ್ರತುಕೆ ನಟನಾ’ ಸಿನಿಮಾ ಆಯ್ದುಕೊಂಡಿದ್ದಾರೆ.

ಸಿತಾರಾ ಎಂಟರ್​ಟೈನ್​ವೆುಂಟ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಸಿದ್ದು ಜೊನ್ನಲ್ಲಗದ್ದ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ‘ಕೃಷ್ಣಾ ಆಂಡ್ ಹಿಸ್ ಲೀಲಾ’ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್​ಗೆ ಜೋಡಿಯಾಗಿ ಸಿದ್ದು ನಟಿಸಿದ್ದರು. ಸದ್ಯ ಹೈದರಾಬಾದ್​ನಲ್ಲಿ ಮುಹೂರ್ತ ಮುಗಿಸಿಕೊಂಡಿರುವ ‘ನರುಡಿ ಬ್ರತುಕೆ ನಟನಾ’ ತಂಡ, ಶೀಘ್ರದಲ್ಲಿಯೇ ಶೂಟಿಂಗ್​ಗೆ ಚಾಲನೆ ನೀಡಲಿದೆ. ಇದರ ಜತೆಗೆ ಅಖಿಲ್ ಅಕ್ಕಿನೇನಿ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಸಿನಿಮಾದಲ್ಲಿಯೂ ಪ್ರಮುಖ ಪಾತ್ರವೊಂದಕ್ಕೆ ನೇಹಾ ಬಣ್ಣ ಹಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net