ನಮ್ಮ ಕಥೆ ಮುಗೀತು ... ಹಾಗಂತ ನೀತೂ ಸಿಂಗ್ ಹೇಳಿದ್ದು ಯಾಕೆ?

Rishi Kapoor Final
Published on

ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ನಿಧನರಾಗಿ ಎರಡು ದಿನಗಳಾಗಿವೆ. ಕಳೆದೆರೆಡು ದಿನಗಳಿಂದ ಶೋಕಾಚರಣೆಯಲ್ಲಿ ಬರೀ ಅವರ ಕುಟುಂಬವಷ್ಟೇ ಅಲ್ಲ, ಇಡೀ ಬಾಲಿವುಡ್ ಮುಳುಗಿದೆ. ಅಮಿತಾಭ್ ಬಚ್ಚನ್, ಹೃತಿಕ್ ರೋಶನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ರಿಷಿ ಕಪೂರ್ ಅವರಿಗೆ ಅಕ್ಷರ ಶ್ರದ್ಧಾಂಜಲಿ ಸಲ್ಲಿಸುತ್ತಲೇ ಇದ್ದಾರೆ.

ಈ ನಡುವೆ ರಿಷಿ ಕಪೂರ್ ಅವರ ಪತ್ನಿ ನೀತೂ ಸಿಂಗ್ ಅಲಿಯಾಸ್ ನೀತೂ ಕಪೂರ್ ಸಹ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ರಿಷಿ ಕಪೂರ್ ಮತ್ತು ನೀತೂ ಸಿಂಗ್ ಅವರ ಸಾಂಗತ್ಯಕ್ಕೆ 45 ವರ್ಷಗಳ ಇತಿಹಾಸವಿದೆ. ‘ಜಹ್ರೀಲಾ ಇನ್ಸಾನ್’ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ ರಿಷಿ ಕಪೂರ್ ಮತ್ತು ನೀತೂ ಸಿಂಗ್, ನಂತರ ಹಲವು ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದರು. ಸ್ನೇಹಿತರಾಗಿದ್ದ ಅವರು, ಕ್ರಮೇಣ ಪ್ರೇಮಿಗಳಾದರು. 1980ರಲ್ಲಿ ದಂಪತಿಗಳಾದರು. ಹೀಗೆ 40 ವರ್ಷಗಳ ಕಾಲ ರಿಷಿ ಕಪೂರ್ ಜತೆಗೆ ಸಂಸಾರ ನಡೆಸಿದ್ದ ನೀತೂ, ತಮ್ಮ ಪತಿಯ ಸಾವಿನ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ.

ಇಷ್ಟಕ್ಕೂ ನೀತೂ ಮಾತನಾಡಿದ್ದಾದರೂ ಏನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಹಾಗ ನೋಡಿದರೆ, ಅವರು ಹೆಚ್ಚೇನೂ ಹೇಳಿಲ್ಲ. ತಮ್ಮ ಪತಿಯ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋ ಕೆಳಗೆ, ಎಂಡ್ ಆಫ್​ ಅವರ್ ಸ್ಟೋರಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರಿಷಿ ಕಪೂರ್ ಅವರು ಕೈಯಲ್ಲಿ ಗ್ಲಾಸ್ ಹಿಡಿದು, ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಅದೆಲ್ಲಾ ಇನ್ನು ಮುಗಿದ ಕಥೆ ಎಂದು ನೀತೂ ಸೂಚ್ಯವಾಗಿ ಹೇಳಿದ್ದಾರೆ.

ನೀತೂ ಸಿಂಗ್ ಅವರ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಿ ಕಪೂರ್ ಅಭಿಮಾನಿಗಳೆಲ್ಲಾ ತಮ್ಮ ಮೆಚ್ಚಿನ ನಟನನ್ನು ನೆನೆದು ಕಂಬನಿ ಮಿಡಿದಿದ್ದಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಸಹ ಹೊರತಲ್ಲ. ಅಭಿಷೇಕ್ ಬಚ್ಚನ್, ಕರೀಷ್ಮಾ ಕಪೂರ್, ಡಯಾನಾ ಪೆಂಟಿ ಸೇರಿದಂತೆ ಹಲವರು ರಿಷಿ ಕಪೂರ್ ಅವರನ್ನು ನೆನೆದು ಶೋಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net