

ಚೆನ್ನೈ: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ "ಗಂಡುಗಲಿ ಮದಕರಿ ನಾಯಕ" ಚಿತ್ರದ ನಾಯಕಿಯಾಗಿ ದಕ್ಷಿಣ ಭಾರತ ಚಿತ್ರರಂಗದ ಪ್ರಖ್ಯಾತ ನಟಿಯ ಹೆಸರು ಕೇಳಿ ಬರುತ್ತಿದೆ.
ಹೌದು, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿರುವ ನಯನತಾರಾ ಮೊದಲ ಬಾರಿಗೆ ದರ್ಶನ್ ಜತೆ ಡುಯೆಟ್ ಆಡಲಿದ್ದಾರೆ ಎನ್ನಲಾಗಿದೆ. ಆದರೆ, ಚಿತ್ರತಂಡ ನಾಯಕಿಯ ಬಗ್ಗೆ ಯಾವುದೇ ಸುಳಿವನ್ನು ಈವರೆಗೂ ನೀಡಿಲ್ಲ. ಆದರೆ, ನಯನತಾರಾ ಹೆಸರು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗಿದ್ದು, ಸಹಿಯೊಂದೆ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ನಯನತಾರಾ ಬಳಿ ಸಾಕಷ್ಟು ಚಿತ್ರಗಳಿರುವುದರಿಂದ ಸಮಯದ ಹೊಂದಾಣಿಕೆ ನೋಡಿಕೊಂಡು ಒಪ್ಪಿಗೆ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನು ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದು, ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಹಿರಿಯ ನಟರಾದ ದೊಡ್ಡಣ, ಶ್ರೀನಿವಾಸ ಮೂರ್ತಿ ಸೇರಿದಂತೆ ಬಹುತಾರಾ ಬಳಗವೇ ಚಿತ್ರತಂಡದಲ್ಲಿದೆ. (ಏಜೆನ್ಸೀಸ್)