ನಯನಕೆ ನಯನ...

Nayanake Nayana
Published on

ಬೆಂಗಳೂರು: ‘ಲೂಸ್ ಮಾದ’ ಯೋಗಿ ನಾಯಕನಾಗಿ ನಟಿಸಿರುವ ‘ಲಂಕೆ’, ಆಗಸ್ಟ್ 20ರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ರಿಲೀಸ್ ಆಗಲು ತಯಾರಿ ನಡೆಸಿದೆ. ಇದೀಗ ಬುಧವಾರ ‘ನಯನಕೆ ನಯನ ...’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಯೋಗಿ ಮತ್ತು ಕೃಷಿ ಕಾಂಬಿನೇಷನ್​ನ ಈ ಹಾಡು ಸೂಫಿ ಶೈಲಿಯಲ್ಲಿ ಮೂಡಿಬಂದಿರುವುದು ವಿಶೇಷ.

ಕರೊನಾ ಎರಡನೇ ಅಲೆ ಆತಂಕದ ನಡುವೆಯೇ ಚಿತ್ರಮಂದಿರಗಳಿಗೆ ಶೇ. 50 ಆಸನ ಭರ್ತಿಗೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಮುಂದಿನ ದಿನಗಳಲ್ಲಿ ಶೇ. 100 ಭರ್ತಿಗೆ ಅನುವು ಮಾಡಿಕೊಡುವ ಸಾಧ್ಯತೆ ಇದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಬಿಡುಗಡೆ ದಿನಾಂಕ ಘೋಷಣೆ ಮಾಡಿರುವ ಚಿತ್ರತಂಡ, ಇದೀಗ ಹಾಡುಗಳ ಮೂಲಕ ಪ್ರಚಾರ ಆರಂಭಿಸಿದೆ.

ಕಳೆದ ಬಾರಿಯ ಸುದ್ದಿಗೋಷ್ಠಿಯಲ್ಲಿ ಸಂಚಾರಿ ವಿಜಯ್ ಇದ್ದರು. ಇದೀಗ ಅವರಿಲ್ಲ ಎಂಬುದು ನೋವಿನ ವಿಚಾರ’ ಎಂದು ಬೇಸರದಲ್ಲೇ ಮಾತು ಶುರು ಮಾಡಿದ ಯೋಗಿ, ಚಿತ್ರ ಮೂಡಿಬಂದಿರುವ ರೀತಿಯ ಬಗ್ಗೆ ಖುಷಿ ವ್ಯಕ್ತಪಡಿಸಿದರು. ‘ನನ್ನ ಕೆರಿಯರ್​ನಲ್ಲಿ ವಿಶೇಷವಾದ ಸಿನಿಮಾ ಇದು’ ಎನ್ನುವ ಯೋಗಿ, ಅದೇ ದಿನ ಅವರ ಮಾವ ‘ದುನಿಯಾ’ ವಿಜಯ್ ಅಭಿನಯದ ‘ಸಲಗ’ ಬಿಡುಗಡೆಯಾಗುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರಮಂದಿರದಲ್ಲಿ ಶೇ.100 ಅವಕಾಶ ನೀಡಿದರಷ್ಟೇ ಅವರು ಬರಲಿದ್ದಾರೆ. ಅಲ್ಲಿಯವರೆಗೂ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಬೇಕಿದೆ. ನಾವಂತೂ ಅಂದೇ ಬರುತ್ತೇವೆ’ ಎನ್ನುತ್ತಾರವರು.

‘ನನಗಿಸಿದ ಮಟ್ಟಿಗೆ ‘ಲಂಕೆ’ ಚಿತ್ರವೇ ನನ್ನ ಮೊದಲ ಸಿನಿಮಾ. ಮನೆಯಿಂದ ಹೊರಡುವಾಗಲೂ ಹಾಗೇ ಅನಿಸಿತ್ತು. ಕರೊನಾ ಹಿನ್ನೆಲೆಯಲ್ಲಿ ತುಂಬ ದಿನಗಳ ಬಳಿಕ ಬರ್ತಿರೋದ್ರಿಂದ ಚೊಚ್ಚಲ ಸಿನಿಮಾದಲ್ಲಿ ನಟಿಸಿದ ಫೀಲ್ ಆಗ್ತಿದೆ. ಈ ಹಿಂದಿನ ‘ಅಕಿರಾ’ ಮತ್ತು ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಹಾಡುಗಳು ಹಿಟ್ ಆಗಿದ್ದವು. ಇದೂ ಸಹ ಆ ಸಾಲಿಗೆ ಸೇರಲಿದೆ ಎಂದು’ ಖುಷಿ ಹಂಚಿಕೊಂಡರು ಕೃಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net